

ತರೀಕೆರೆ: ದೇಗುಲಗಳಲ್ಲಿ ಭಕ್ತರಿಗೆ ಅನ್ನ ಪ್ರಸಾದ ವಿನಿಯೋಗಿಸುವ ಪದ್ಧತಿ ಶುಭಕರ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಪಟ್ಟಣದ ಶ್ರೀಪ್ರಸನ್ನ ರಾಮೇಶ್ವರ ಸ್ವಾಮಿ ದೇವಾಲಯದಲ್ಲಿ ಅನ್ನ ಸಂತರ್ಪಣೆಗೆ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಐತಿಹಾಸಿಕ ಹಿನ್ನೆಲೆಯಳ್ಳ ಪಟ್ಟಣದ ಚಿಕ್ಕೆರೆಯಂಚಿನಲ್ಲಿರುವ ದೇಗುಲ ಅಸಂಖ್ಯಾತ ಭಕ್ತರ ಶ್ರದ್ಧಾಭಕ್ತಿ ಕೇಂದ್ರವಾಗಿದೆ. ಅನ್ನದಾನಕ್ಕೆ ವಿಶೇಷ ಮಹತ್ವವಿದೆ. ದೇಗುಲದಲ್ಲಿ ಅನ್ನದಾಸೋಹದ ಶೆಡ್ ನಿರ್ಮಾಣಕ್ಕೆ ಅಗತ್ಯ ಆರ್ಥಿಕ ನೆರವು ನೀಡಲಾಗುವುದು. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರ ಹೊಟ್ಟೆ ತುಂಬಿಸುವ ಕಾರ್ಯ ನಿರಂತರಗೊಳಿಸಿದೆ. ಈ ಸಲುವಾಗಿ ಅನ್ನಭಾಗ್ಯ ಸೇರಿ ಹಲವು ಉಪಯುಕ್ತ ಯೋಜನೆ ಅನುಷ್ಟಾನಗೊಳಿಸಿದೆ ಎಂದರು.
ಕುಂಬಾರಗುಂಡಿ ಹಿರೇಮಠದ ಶ್ರೀಜಗದೀಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಜಗತ್ತಿನ ಎಲ್ಲ ಪ್ರಾಣಿ, ಪಕ್ಷಿಗಳಲ್ಲದೆ, ಬುದ್ಧಿಜೀವಿಯಾದ ಮನುಷ್ಯನಿಗೂ ದೇವರೇ ಆಹಾರ ನೀಡುತ್ತಾನೆ. ಈ ಕಾರಣದಿಂದಲೇ ಶರಣರು ಅನ್ನ ದಾಸೋಹ ತತ್ವ ಪ್ರತಿಪಾದಿಸಿದ್ದಾರೆ. ಮನುಷ್ಯರಾದವರು ಗಳಿಸಿ ಉಳಿಸಿದ ಹಣದಲ್ಲಿ ಅನ್ನದಾಸೋಹ ಮಾಡಬೇಕು ಎಂದು ಹೇಳಿದರು.
ಪುರಸಭೆ ಸದಸ್ಯ ಪಾರ್ವತಮ್ಮ, ಮಾಜಿ ಅಧ್ಯಕ್ಷ ಟಿ.ಎಸ್.ಧರ್ಮರಾಜ್, ಜಿ.ಎಚ್.ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಅಧ್ಯಕ್ಷೆ ವಾಣಿ, ದೇಗುಲ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚೇತನ್, ಪ್ರಮುಖರಾದ ಉದ್ದೇಶ, ರಮೇಶ್, ಶಿವಣ್ಣ ಮತ್ತಿತರರಿದ್ದರು