

ಹುಣಸೂರು: ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಯರನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಹಲವಾರು ದೈಹಿಕ ತೊಂದರೆಗಳಿಗೆ ಪರಿಹಾರ ಸಿಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ತಾಲೂಕಿನ ನೇರಳಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹೆಬ್ಬಳ್ಳ ಹಾಡಿಯ ಸಮುದಾಯ ಭವನದಲ್ಲಿ ಬುಧವಾರ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶೇಷ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಹೆಣ್ಣುಮಕ್ಕಳನ್ನು ರಕ್ತಹೀನತೆ ಬಹುವಾಗಿ ಕಾಡುವ ಕಾಯಿಲೆ. ಹಿಮೋಗ್ಲೋಬಿನ್ ಅಂಶದ ಕೊರತೆ ಬಾಲಕಿಯರಾದಿಯಾಗಿ, ಕಿಶೋರಿಯರು, ಗರ್ಭಧಾರಿತ ಮಹಿಳೆಯರನ್ನು ಬಾಧಿಸುತ್ತದೆ. ರಕ್ತಹೀನತೆಯ ನಿವಾರಣೆಯಿಂದ ಸಾಕಷ್ಟು ತೊಂದರೆಗಳನ್ನು ಪರಿಹರಿಸಬಹುದಾಗಿದೆ ಎಂದರು.
ಮಹಿಳೆಯರಲ್ಲಿ ರಕ್ತಹೀನತೆಯನ್ನು ಗುರುತಿಸಿದ ನಂತರ ಐರನ್ ಮತ್ತು ಫೋಲಿಕ್ ಆ್ಯಸಿಡ್‌ನಂತಹ ಮಾತ್ರೆ, ಟಾನಿಕ್ ನೀಡಿದ ನಂತರ ಕರ್ತವ್ಯ ಮುಗಿಯಿತು ಎಂದುಕೊಳ್ಳಬಾರದು. ಅದರಲ್ಲೂ ಮುಖ್ಯವಾಗಿ ಹಾಡಿ ಮಹಿಳೆಯರಲ್ಲಿ ರಕ್ತಹೀನತೆ ದುಷ್ಪರಿಣಾಮಗಳ ಕುರಿತು ಸತತವಾಗಿ ಅರಿವು ಮೂಡಿಸಬೇಕಿದೆ. ಮನೆಮನೆಗೆ ತೆರಳಿ ರಕ್ತಹೀನತೆಯಿಂದ ಬಳಲುತ್ತಿರುವವರನ್ನು ಗುರುತಿಸಿ ಸ್ಥಳೀಯವಾಗಿ ಸಿಗಬಹುದಾದ ಹಸಿರು ತರಕಾರಿಗಳ ಬಳಕೆ, ಆಹಾರ ಪದ್ಧತಿಯಲ್ಲಿನ ಸೂಕ್ತ ಬದಲಾವಣೆ ಕುರಿತು ಮಾಹಿತಿ ನೀಡಬೇಕು. ವೃತ್ತಿಪರರಾಗಿ ನಾವು ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವ ಅಗತ್ಯತೆ ಹೆಚ್ಚಿದೆ. ಆಗ ಮಾತ್ರ ರಕ್ತಹೀನತೆಯಂತಹ ತೊಂದರೆಗಳಿಂದ ಮಹಿಳೆಯರು ಪಾರಾಗಲು ಸಾಧ್ಯ ಎಂದರು.
ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ.ಬೃಂದಾ, ಸಂಚಾರಿ ಗಿರಿಜನ ಆರೋಗ್ಯ ಘಟಕದ ಡಾ.ಸೌಮ್ಯಶ್ರೀ ಮಾತನಾಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮುನೀಂದ್ರಮ್ಮ, ತಾಲೂಕು ಗಿರಿಜನ ಅಭಿವೃದ್ಧಿ ಸಹಾಯಕ ನಿರ್ದೇಶಕ ಅರುಣ್ ಪ್ರಭು, ಹಾಡಿಯ ಅಧ್ಯಕ್ಷ ಚಂದ್ರು, ಗ್ರಾ.ಪಂ.ಸದಸ್ಯೆ ಗೌರಮ್ಮ, ಪಿಡಿಒ ಷಡಕ್ಷರಿ, ವೈದ್ಯರಾದ ಡಾ.ಎಚ್.ಬಿ.ಉಮೇಶ್, ಡಾ. ಜೈನ್‌ಸಿಂಗ್, ಡಾ.ಚೈತ್ರಾಶ್ರೀ, ಡಾ.ಪಾದುಲ್ಲಾಖಾನ್, ಡಾ.ಸುನಂದಾ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ ಹಾಜರಿದ್ದರು.