

ಧಾರವಾಡ: ಪೂಜ್ಯ ವೀರೇಂದ್ರ ಹೆಗ್ಗಡೆಯವರ ಸಾಧನೆಗಳು ಸರ್ವರಿಗೂ, ಸರ್ವಕಾಲಕ್ಕೂ ಆದರ್ಶನೀಯ. ಜೆಎಸ್‌ಎಸ್ ಹಾಗೂ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಮೂಲಕ ಶಿಕ್ಷಣ ಮತ್ತು ವೈದ್ಯಕೀಯ ಕಾಲೇಜು, ಆಸ್ಪತ್ರೆಗಳ ಮೂಲಕ ಜನರ ಆರೋಗ್ಯದ ಕಾಳಜಿ ಮಾಡುತ್ತಿರುವುದು ಸಾಮಾಜಿಕ ಕಳಕಳಿಗೆ ಕನ್ನ ಎಂದು ಬೆಳಗಾವಿಯ ಭರತೇಶ ಎಜುಕೇಶನ್ ಟ್ರಸ್ಟ್‌ನ ಕಾಯದರ್ಶಿ ವಿನೋದ ದೊಡ್ಡಣ್ಣವರ ಹೇಳಿದರು.
ನಗರದ ವಿದ್ಯಾಗಿರಿಯ ಜೆಎಸ್‌ಎಸ್ ಸಂಸ್ಥೆಯ ಸನ್ನಿಧಿ ಕಲಾಕ್ಷೇತ್ರದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 75ನೇ ಜನ್ಮದಿನ ಪ್ರಯುಕ್ತ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯ 3,000 ವಿದ್ಯಾರ್ಥಿಗಳು ಹೆಗ್ಗಡೆಯವರ ಮುಖವಾಡ ಧರಿಸಿ ಶುಭ ಕೋರುವ ವಿಶ್ವದಾಖಲೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಜನರ ಕೃಷೀಯೇತರ ಜೀವನದ ಅಭಿವೃದ್ಧಿಗೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಹುಟ್ಟು ಹಾಕಿ, ಅಸಹಾಯಕ ಗ್ರಾಮೀಣ ಕೃಷಿಕರಿಗೆ ಸಾಧನೆಗೆ ಪೂರಕ ಕಾರ್ಯ ಮಾಡಿದ್ದಾರೆ. ಪರೋಪಕಾರಿ ಗುಣಗಳನ್ನು ಶಿಕ್ಷಣ ಸಂಸ್ಥೆಯ ಮಕ್ಕಳಲ್ಲಿ ಬಿತ್ತುತ್ತಿದ್ದಾರೆ ಎಂದರು.
ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಮಾತನಾಡಿ, ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಹುರಿದುಂಬಿಸಬೇಕು. ಇದರಿಂದ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಹೊರಹಾಕಲು ಸಾಧ್ಯವಾಗುತ್ತದೆ. ಡಾ. ಹೆಗ್ಗಡೆಯವರು ಶಿಕ್ಷಣದ ಜೊತೆಗೆ ಆಸ್ಪತ್ರೆಗಳ ಮೂಲಕ ಜನಪರ ಆರೊಗ್ಯದ ಕಾಳಜಿ ಮಾಡುತ್ತ ರುಡಸೆಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಪಿ ನಿರುದ್ಯೋಗಿ ಯುವಕ- ಯುವತಿಯರಲ್ಲಿ ಶಕ್ತಿ ತುಂಬಿದ್ದಾರೆ ಎಂದರು.
ವಿಶ್ವದಾಖಲೆಯ ಕಾರ್ಯಕ್ರಮವನ್ನು ಡಾ. ವೀರೇಂದ್ರ ಹೆಗ್ಗಡೆಯವರು ವಿಡಿಯೋ ಕಾಲ್ ಮೂಲಕ ವೀಕ್ಷಿಸಿ ಮಕ್ಕಳನ್ನು ಆಶೀರ್ವದಿಸಿದರು.
ಮಹಾವೀರ ಉಪಾಧ್ಯೆ, ಸಾಧನಾ ಎಸ್., ಸುಕನ್ಯಾ, ಶಾಮಲಾ, ಇತರರಿದ್ದರು.