ಸಂಪುಟ ಸಭೆಯಲ್ಲಿ ವಿಶೇಷ ಅನುದಾನ ಘೋಷಿಸಿ

17 HANUR 2
ಹನೂರಿನಲ್ಲಿ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ರೈತರು ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದರು.
Published on

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಏ.24 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚಾಮರಾಜನಗರ ಜಿಲ್ಲೆಗೆ ವಿಶೇಷ ಅನುದಾನ ಘೋಷಿಸದಿದ್ದಲ್ಲಿ ಪ್ರತಿರೋಧ ವ್ಯಕ್ತಪಡಿಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಎಚ್ಚರಿಕೆ ನೀಡಿದರು.

ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಗುರುವಾರ ಹನೂರಿನ ರೈತ ಸಂಘದ ಗ್ರಾಮ ಘಟಕ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ರೈತ ಸಂಘದ ಗ್ರಾಮ ಘಟಕವನ್ನು ಸ್ಥಾಪಿಸಲಾಗಿದೆ. ಆದರೆ ತಾಲೂಕು ಕೇಂದ್ರ ಹನೂರಿನಲ್ಲಿ ಸಂಘವನ್ನು ಈವರೆಗೂ ಸ್ಥಾಪಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ರೈತರು ಸಮಸ್ಯೆಗಳನ್ನು ಬಗೆಹರಿಸಕೊಳ್ಳಲು ಹಾಗೂ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ತುಂಬಾ ತೊಂದರೆ ಪಡಬೇಕಿತ್ತು. ಇದೀಗ 50ಕ್ಕೂ ಹೆಚ್ಚು ಸದಸ್ಯರನ್ನೊಳಗೊಂಡ ಸಂಘವನ್ನು ಹನೂರಿನಲ್ಲಿ ಉದ್ಘಾಟಿಸಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಪರಸ್ಪರ ಸಂಘಟಿತರಾಗಬೇಕಿದೆ. ಇನ್ನು ಸರ್ಕಾರ ಚಾ.ನಗರ, ಗುಂಡ್ಲುಪೇಟೆಯ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸಲಾಗಿದೆ. ಆದರೆ ಹನೂರಿನಲ್ಲಿ ರೈತರು ಸಂಘಟನೆಯಾಗದ ಪರಿಣಾಮ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಿಲ್ಲ. ಇದರಿಂದ ಸಮರ್ಪಕ ಕೃಷಿಗೆ ತೊಡಕಾಗಿದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಂಡು ಸರ್ಕಾರದ ವಿರುದ್ಧ ಧ್ವನಿ ಎತ್ತಬೇಕು. ಹೀಗಾದಾಗ ರೈತರ ಸಮಸ್ಯೆಗಳು ಬಗೆಹರಿಯುತ್ತವೆ. ಇನ್ನು ಹನೂರು ಸೇರಿದಂತೆ ಚಾ.ನಗರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಇದರಿಂದ ಜನರು ಸೌಕರ್ಯದಿಂದ ವಂಚಿತರಾಗಿದ್ದು, ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಮ.ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಕಾಳಜಿ ವಹಿಸಿ ಜಿಲ್ಲೆಗೆ ವಿಶೇಷ ಅನುದಾನ ಘೋಷಿಸಬೇಕು. ಇಲ್ಲವಾದಲ್ಲಿ ರೈತರೇ ಹಣವನ್ನು ಸಂಗ್ರಹಿಸಿ ನೀಡುವುದರ ಮೂಲಕ ಪ್ರತಿರೋಧವನ್ನು ವ್ಯಕ್ತಪಡಿಸಲಾಗುವುದು ಎಂದು ಎಚ್ಚರಿಸಿದರು.

ತಹಸೀಲ್ದಾರ್ ಕಚೇರಿಗೆ ಮುತ್ತಿಗೆ: ಬಳಿಕ ಪಟ್ಟಣದ ಸೆಸ್ಕ್ ಉಪವಿಭಾಗೀಯ ಕಚೇರಿಯಲ್ಲಿ ಗುತ್ತಿಗೆದಾರರು ವಿದ್ಯುತ್ ಕಂಬವನ್ನು ಅಳವಡಿಸುವಲ್ಲಿ ರೈತರಿಂದ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ನೂರಾರು ರೈತರು ಸೆಸ್ಕ್ ಕಚೇರಿಗೆ ಆಗಮಿಸಿದರು. ಆದರೆ ಎಇಇ ಇಲ್ಲದ ಕಾರಣ ಅಲ್ಲಿನ ನೌಕರರಿಗೆ ಎಚ್ಚರಿಕೆ ನೀಡಿ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದರು.

ಈ ವೇಳೆ ರೈತರು ಮಾತನಾಡಿ, ವಿದ್ಯುತ್ ಸೇವಾ ಕಾರ್ಯಗಳಿಗೆ ನಿಗದಿಪಡಿಸಿರುವ ಶುಲ್ಕದ ಮಾಹಿತಿಯನ್ನು ಫಲಕದಲ್ಲಿ ಅಳವಡಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೆ ಈವರೆಗೂ ಅಳವಡಿಸಿಲ್ಲ. ಜಮೀನಿನಲ್ಲಿ ಒಂದು ವಿದ್ಯುತ್ ಕಂಬವನ್ನು ಹೊಸದಾಗಿ ಅಳವಡಿಸಬೇಕಾದರೆ ಇಲ್ಲಿನ ಗುತ್ತಿಗೆದಾರರು ರೈತರಿಂದ 30 ಸಾವಿರ ರೂ. ಪಡೆಯುತ್ತಿದ್ದು, ಅನ್ಯಾಯವೆಸಗುತ್ತಿದ್ದಾರೆ. ಇನ್ನು ಈ ಭಾಗದಲ್ಲಿ ಕಾಡು ಪ್ರಾಣಿಗಳು ಆಗಾಗ್ಗೆ ಜಮೀನುಗಳಿಗೆ ಲಗ್ಗೆ ಇಟ್ಟು ಫಸಲನನ್ನು ನಾಶಪಡಿಸುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಕೃಷಿಯಲ್ಲಿ ನಷ್ಟವನ್ನು ಅನುಭವಿಸುತ್ತಿದ್ದು, ಕಾಡು ಪ್ರಾಣಿಗಳದ್ದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಇತ್ತ ಆರ್.ಎಸ್.ದೊಡ್ಡಿ ಸಮೀಪದ ಕೋಳಿ ಸಾಕಣೆಗೆ ಕೇಂದ್ರದಲ್ಲಿ ಸಮರ್ಪಕ ನಿರ್ವಹಣೆ ಇಲ್ಲದ ಪರಿಣಾಮ ಅನೈರ್ಮಲ್ಯ ಮನೆ ಮಾಡಿದ್ದು, ಈ ಭಾಗದಲ್ಲಿ ವಾಸಿಸುವ ಕುಟುಂಬಗಳು ತುಂಬಾ ತೊಂದರೆಯನ್ನು ಎದುರಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಅವರು ಪ್ರತಿಕ್ರಿಯಿಸಿ, ಸಚಿವ ಸಂಪುಟ ಸಭೆಯ ಬಳಿಕ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದರು. ಆದರೆ ಇದಕ್ಕೊಪ್ಪದ ರೈತರು ಸಚಿವ ಸಂಪುಟ ಸಭೆಗೂ ಮುನ್ನವೇ ಈ ಕೆಲಸವಾಗಬೇಕು ಎಂದು ಪಟ್ಟು ಹಿಡಿದರು. ಬಳಿಕ ಸದ್ಯದಲ್ಲಿಯೇ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದು ಎಂದು ತಹಸೀಲ್ದಾರ್ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ, ರೈತ ಮುಖಂಡರಾದ ವಿನೇಶ್, ರಾಜು, ರಂಗಸ್ವಾಮಿ, ಪುಟ್ಟಸ್ವಾಮಿ, ದೊರೆಸ್ವಾಮಿ, ಮಾದೇವ, ಸಿದ್ದರಾಜು ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net