

ಕುಶಾಲನಗರ: ಶಾಸಕ ಡಾ.ಮಂತರ್‌ಗೌಡ ಅವರ ಸತತ ಪ್ರಯತ್ನದ ಫಲವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಡಿಕೇರಿ ಕ್ಷೇತ್ರಕ್ಕೆ 50 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಿದ್ದು, ಸದ್ಯದಲ್ಲೇ ಬಿಡುಗಡೆ ಆಗಲಿದೆ ಎಂದು ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಂ ಖಾನ್ ಮಾಹಿತಿ ನೀಡಿದರು.
ಕುಶಾಲನಗರದಲ್ಲಿ 1.5 ಎಕರೆ ಪ್ರದೇಶಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಪುರಸಭೆಯ ನೂತನ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಪೌರಾಡಳಿತ ಸಂಸ್ಥೆಗಳು ಸ್ವಾವಲಂಬಿಗಳು ಆಗಬೇಕು ಎನ್ನುವುದು ಸರ್ಕಾರದ ನಿಲುವು. ಈ ನಿಟ್ಟಿನಲ್ಲಿ ಕುಶಾಲನಗರ ಪುರಸಭೆ ಕರ್ನಾಟಕದಲ್ಲೇ ಮೊದಲ ಬಾರಿ ಸ್ವಂತ ನಿಧಿಯ ಹಣದಿಂದ ಸುಸಜ್ಜಿತ ಕಚೇರಿ ಕಟ್ಟಡ ನಿರ್ಮಾಣ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಇದು ಮಾದರಿ ಕಾರ್ಯವೂ ಹೌದು ಎಂದರು.
ಕೊಡಗು ಜಿಲ್ಲೆಗೆ ಹೊಸದಾಗಿ ಮೂರು ಇಂದಿರಾ ಕ್ಯಾಂಟೀನ್‌ಗಳನ್ನು ನೀಡಲಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸು. ಆರಂಭದಲ್ಲಿ ರಾಜ್ಯದಲ್ಲಿ 106 ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು. ಮತ್ತೆ 185 ಇಂದಿರಾ ಕ್ಯಾಂಟೀನ್‌ಗಳನ್ನು ತೆರೆಯಲಾಗಿದೆ. ಕುಶಾಲನಗರ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ, ತಿಂಡಿಗೆ ಹೆಚ್ಚಿನ ಬೇಡಿಕೆ ಇರುವುದರ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗಿನ ತಿಂಡಿ ಮತ್ತು ಮಧ್ಯಾಹ್ನದ ಊಟವನ್ನು ಈಗಿರುವ 300ರಿಂದ 500ಕ್ಕೆ ಏರಿಸಲು ಕ್ರಮ ತೆಗೆದುಕೊಳ್ಳಲಾಗುವುದು. ರಾತ್ರಿ ಎಂದಿನಂತೆ 300 ಊಟ ಇರಲಿದೆ ಎಂದು ತಿಳಿಸಿದರು.
ಕುಶಾಲನಗರ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರನ್ನು ರಾಜ್ಯಕ್ಕೆ ಕೊಟ್ಟ ಊರು. ಹಾಗಾಗಿ ಈ ಊರಿನ ಅಭಿವೃದ್ಧಿಗೆ ಶಾಸಕ ಡಾ.ಮಂತರ್‌ಗೌಡ ಅವರಿಗೆ ಒತ್ತಾಸೆಯಾಗಿ ಸರ್ಕಾರ, ಮುಖ್ಯಮಂತ್ರಿ ಹಾಗೂ ತಮ್ಮ ಇಲಾಖೆ ಇಲ್ಲ ಸಹಕಾರ ನೀಡಲಿದೆ ಎಂದು ಹೇಳಿದರು.
ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ಪ.ಪಂನಿಂದ ಪುರಸಭೆಯಾಗಿ ಕುಶಾಲನಗರ ಮೇಲ್ದರ್ಜೆಗೆ ಏರಿದರೂ ಸುಸಜ್ಜಿತ ಕಚೇರಿ ಕಟ್ಟಡ ಇಲ್ಲ ಎನ್ನುವ ಕೊರಗಿತ್ತು. ನೂತನ ಕಚೇರಿ ಉದ್ಘಾಟನೆ ನಂತರ ಆ ಕೊರಗು ನಿವಾರಣೆ ಆಗಿದೆ. ಪುರಸಭೆಯ ಅಧಿಕಾರಿ ಮತ್ತು ಸಿಬ್ಬಂದಿ ಇನ್ನು ಮುಂದೆ ಸಾರ್ವಜನಿಕರಿಗೆ ಯಾವುದೇ ನೆಪ ಹೇಳದೆ ಅವರ ಕೆಲಸಗಳನ್ನು ಮಾಡಿಕೊಡಬೇಕು. ಕೆಲಸ ಮಾಡಿಸಿಕೊಳ್ಳಲು ಬರುವವರನ್ನು ಸತಾಯಿಸಬಾರದು ಎಂದು ಸಲಹೆ ನೀಡಿದರು.
ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಪುತ್ಥಳಿಯನ್ನು ಪುರಸಭೆ ಆವರಣದಲ್ಲಿ ಸ್ಥಾಪಿಸಲು ಚಿಂತನೆ ಮಾಡಲಾಗಿದೆ. ಇದಕ್ಕೆ ಸಚಿವರು ಅಗತ್ಯ ಸಹಕಾರ ನೀಡಬೇಕು. ಕುಶಾಲನಗರ ಪುರಸಭೆಗೆ ಗುಡ್ಡೆಹೊಸೂರು ಗ್ರಾ.ಪಂ.ನ ಸ್ವಲ್ಪ ಭಾಗ ಮತ್ತು ಮುಳ್ಳುಸೋಗೆ ಗ್ರಾ.ಪಂ. ಸೇರ್ಪಡೆಯಾಗಿ 23 ಸದಸ್ಯರನ್ನು ಹೊಂದಿದೆ. ಹಾಗಾಗಿ ಕುಶಾಲನಗರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ ಸಹಕಾರ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಆರ್. ಗುಂಡೂರಾವ್ ದೂರದೃಷ್ಟಿ ಫಲವಾಗಿ ಕುಶಾಲನಗರ ಇಂದು ಈ ಮಟ್ಟಿಗೆ ಅಭಿವೃದ್ಧಿ ಸಾಧಿಸಿದೆ. ಕುಶಾಲನಗರ ಸ್ಥಳೀಯ ಆಡಳಿತದ ಚುಕ್ಕಾಣಿ ಹಿಡಿದಿದ್ದ ಹಿರಿಯರಾದ ಚಿಕ್ಕಣ್ಣ, ಮೀರಮೊಹಿದ್ದಿನ್ ನಂಥ ಘಟಾನುಘಟಿ ನಾಯಕರು ಇಲ್ಲಿ ಜನಪರ, ದಕ್ಷ ಆಡಳಿತ ನಡೆಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಇದೀಗ ಶಾಸಕ ಡಾ.ಮಂತರ್‌ಗೌಡ ಮಡಿಕೇರಿ ಕ್ಷೇತ್ರದ ಅಭಿವೃದ್ಧಿಗಾಗಿ ದೀಕ್ಷೆ ತೊಟ್ಟಿದ್ದು, ಗುಂಡೂರಾವ್ ನಂತರ ಇಂಥ ತುಡಿತ ಹೊಂದಿರುವವರಾಗಿ ಗುರುತಿಸಿಕೊಂಡಿದ್ದಾರೆ. ನನೆಗುದಿಗೆ ಬಿದ್ದಿದ್ದ ಪುರಸಭೆ, ಕಲಾಭವನ, ಯುಜಿಡಿ, ಕುಡಿಯುವ ನೀರಿನ ಯೋಜನೆಗಳಿಗೆ ಕಾಯಕಲ್ಪ ನೀಡುವ ಜತೆಗೆ ವಿಶೇಷ ಅನುದಾನ ತಂದು ಅಭಿವೃದ್ಧಿ ಪಡಿಸಿದ್ದಾರೆ. ಕುಶಾಲನಗರ ಅತ್ಯಂತ ವೇಗವಾಗಿ ಬೆಳವಣಿಗೆ ಸಾಧಿಸುತ್ತಿದ್ದು, ಪುರಸಭೆಗೆ ಮುಂದಿನ ಒಂದು ಚುನಾವಣೆ ಆದ ನಂತರ ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಲು ಶಾಸಕ ಮಂತರ್‌ಗೌಡ ಪ್ರಯತ್ನಿಸಬೇಕು ಎಂದರು.
ಪುರಸಭೆ ಸದಸ್ಯ ಡಿ.ಕೆ.ತಿಮ್ಮಪ್ಪ ಮಾತನಾಡಿ, ಪುರಸಭೆ ತನ್ನ ತೆರಿಗೆ ಹಣದಿಂದ ಹೊಸ ಕಟ್ಟಡ ನಿರ್ಮಾಣ ಮಾಡಿದೆ. ಅದೇ ರೀತಿ 9, 11 ಬಿ. ಫಾರಂ ನೀಡುವಾಗ ಅನಧಿಕೃತ ನಿವೇಶನಗಳಿಗೆ ಅಧಿಕೃತ ಬಿ ಫಾರ್ಮ್ ಕೊಡಲು ಕ್ರಮ ಕೈಗೊಳ್ಳಬೇಕು. ಕಲಾಭವನ, ಗೃಹ ಭಾಗ್ಯ, ಹೌಸಿಂಗ್ ಫಾರ್ ಆಲ್ ಯೋಜನೆಗೆ ಅನುಮತಿ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮೀ ಚಂದ್ರು ಮಾತನಾಡಿ, ತನ್ನ ಅವಧಿಯಲ್ಲಿ ಪುರಸಭೆ ನೂತನ ಕಚೇರಿ ಆರಂಭ ಆಗುತ್ತಿರುವುದು ಖುಷಿ ತಂದಿದೆ ಎಂದರು.
ಉಪಾಧ್ಯಕ್ಷೆ ಪುಟ್ಟಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ.ಸುರೇಶ್, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಪ್ರಮೋದ್ ಮುತ್ತಪ್ಪ, ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಪುರಸಭೆ ಕಾನೂನು ಸಲಹೆಗಾರ ಆರ್.ಕೆ. ನಾಗೇಂದ್ರ ಬಾಬು, ಮುಖಂಡರಾದ ಕೆ.ಪಿ. ಚಂದ್ರಕಲಾ, ಪುರಸಭೆ ಸದಸ್ಯರು, ಜಿಲ್ಲಾಧಿಕಾರಿ ವೆಂಕಟ್ ರಾಜಾ, ತಹಸೀಲ್ದಾರ್ ಕಿರಣ್ ಗೌರಯ್ಯ, ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಇದ್ದರು.
ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಅವರನ್ನು ಜಿಲ್ಲೆಯ ಹೆಬ್ಬಾಗಿಲು ಕೊಪ್ಪ ಗೇಟ್ ಬಳಿ ಕಾಂಗ್ರೆಸ್ ವತಿಯಿಂದ ಸ್ವಾಗತಿಸಲಾಯಿತು. ಶಾಸಕ ಡಾ.ಮಂತರ್ ಗೌಡ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಮತ್ತಿತರರು ಬರಮಾಡಿಕೊಂಡರು. ನಂತರ ಸಚಿವರು ಇಲ್ಲಿನ ಸರ್ಕಾರಿ ಬಸ್ ನಿಲ್ದಾಣ ಆವರಣದಲ್ಲಿ ಇರುವ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕ್ಯಾಂಟೀನ್ ಉಪಯೋಗ ಪಡೆದುಕೊಳ್ಳುತ್ತಿರುವವರ ಬಗ್ಗೆ ಮಾಹಿತಿ ಪಡೆದುಕೊಂಡರು.