

ಕಡೂರು: ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿಶೇಷ ಅನುದಾನಗಳ ಅವಶ್ಯಕತೆ ಹೆಚ್ಚಿದೆ ಎಂದು ಯಳ್ಳಂಬಳಸೆ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದರು.
ಯಳ್ಳಂಬಳಸೆ ಗ್ರಾಪಂ ಕಚೇರಿಯಲ್ಲಿ ಶುಕ್ರವಾರ ನಡೆದ ಗ್ರಾಮಸಭೆಯಲ್ಲಿ ಮಾತನಾಡಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುದಾನ ಹೆಚ್ಚು ಬೇಕಿದೆ. ಇದಕ್ಕೆ ಸಂಬಂಧಿಸಿದ ತಾಲೂಕು ಪಂಚಾಯಿತಿ ಅಧಿಕಾರಿಗಳು ವಿಶೇಷ ಅನುದಾನ ಕೋರಿ ಪ್ರಸ್ತಾವನೆ ಕಳುಹಿಸಿಕೊಡಬೇಕು ಎಂದರು.
ಗ್ರಾಮಗಳಲ್ಲಿ ಎಲ್ಲ ಸದಸ್ಯರ ವಿಶ್ವಾಸದೊಂದಿಗೆ ನರೇಗಾ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜತೆಗೆ ಸರ್ಕಾರದ ವಿಶೇಷ ಅನುದಾನ ಲಭ್ಯವಾದರೆ ಮತ್ತಷ್ಟು ಪ್ರಗತಿಗೆ ಪೂರಕವಾಗಲಿದೆ ಎಂದು ಹೇಳಿದರು.
ತಾಪಂ ಸಹಾಯಕ ನಿರ್ದೇಶಕ ದಿನೇಶ್ ಮಾತನಾಡಿ, ಕಂದಾಯ ವಸೂಲಾತಿಯಲ್ಲಿ ಪ್ರಗತಿ ಸಾಧಿಸಿದರೆ ಗ್ರಾಪಂ ಆದಾಯದ ಮಟ್ಟ ಸುಧಾರಣೆಗೊಳಿಸಬಹುದು. ಈ ನಿಟ್ಟಿನಲ್ಲಿ ಗ್ರಾಪಂ ಆಡಳಿತ ಮಂಡಳಿ ಹೆಚ್ಚಿನ ಕ್ರಮ ವಹಿಸಬೇಕಿದೆ ಎಂದರು.
ಗ್ರಾಪಂ ಉಪಾಧ್ಯಕ್ಷೆ ಪುಷ್ಪಲತಾ ಸೋಮೇಶ್, ಸದಸ್ಯರಾದ ಸಲೀಂ, ಚೈತ್ರಾ ರವಿಕುಮಾರ್, ಪ್ರೇಮಾವತಿ ಕೇಶವಪ್ಪ, ಸೋಮೇಶ್, ಯಳಗೊಂಡನಹಳ್ಳಿ ಈಶ್ವರಪ್ಪ, ಪಿಡಿಒ ಮಹ್ಮದ್ ಇಸ್ಮಾಯಿಲ್‌ಖಾನ್ ಹಾಗೂ ಗ್ರಾಮಸ್ಥರು ಇದ್ದರು.