

ಯಳಂದೂರು: ಸಮೀಪದ ಸಂತೆಮರಹಳ್ಳಿ ಹೋಬಳಿ ವ್ಯಾಪ್ತಿಯ ಕಮರವಾಡಿ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಸ್‌ಇಪಿ ಯೋಜನೆಯಡಿ ಇಲ್ಲಿನ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ 25 ಲಕ್ಷ ರೂ. ಹಣ ಬಿಡುಗಡೆಯಾಗಿದೆ. ಅಲ್ಲದೆ ಈ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಆದಿಜಾಂಬವರ ಬೀದಿಯ ಸ್ಮಶಾನದ ಅಭಿವೃದ್ಧಿಗೆ 20 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಕಮರವಾಡಿ ಗ್ರಾಮದ ವೀರಶೈವರ ಬೀದಿಯ ಬಸಪ್ಪನ ದೇಗುಲದ ಬಳಿಯಲ್ಲಿ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ಬಸವ ಭವನದ ನಿರ್ಮಾಣಕ್ಕೆ 10 ಲಕ್ಷ ರೂ. ಬಿಡುಗಡೆಯಾಗಿದ್ದು, ಈ ಎಲ್ಲ ಕಾಮಗಾರಿಗಳಿಗೂ ನಾನು ಭೂಮಿ ಪೂಜೆ ನೆರವೇರಿಸಿದ್ದೇನೆ. ನನಗೆ ಬಂದ ಶಾಸಕರ ವಿಶೇಷ ಅನುದಾನವನ್ನು ನನ್ನ ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ನಾನು ಎಲ್ಲ ಜಾತಿ, ಧರ್ಮಗಳ ಸಮುದಾಯ ಭವನಗಳಿಗೆ ಹಾಕಿದ್ದೇನೆ. ಇದರ ಉದ್ದೇಶ ಸ್ಪಷ್ಟವಾಗಿದ್ದು ಎಲ್ಲ ಅಪೂರ್ಣ ಸಮುದಾಯ ಭವನಗಳನ್ನು ಪೂರ್ಣಗೊಳಿಸುವುದೆ ಆಗಿದೆ. ಅಲ್ಲದೆ ಎಸ್‌ಇಪಿ, ಟಿಎಸ್‌ಪಿ ಸೇರಿದಂತೆ ಇತರ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಇಲಾಖೆಯಿಂದ ಅನುದಾನಗಳನ್ನು ಕ್ಷೇತ್ರ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಅನುದಾನಗಳನ್ನು ಪ್ರತ್ಯೇಕವಾಗಿ ಇಟ್ಟಿದ್ದರೂ ಸಹ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡುತ್ತಿದೆ. ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಅಧಿಕಾರವಿಲ್ಲದಿದ್ದರೂ ಜನರ ಕಷ್ಟಕ್ಕೆ ಸ್ಪಂದನೆ: ಎ.ಆರ್. ಕೃಷ್ಣಮೂರ್ತಿ ಮಾಜಿ ರಾಜ್ಯಪಾಲ ದಿ. ರಾಚಯ್ಯ ಅವರ ಸುಪುತ್ರರಾಗಿದ್ದು. ಸದಾ ಅಭಿವೃದ್ಧಿ ಪರ ಕಾಳಜಿಯುಳ್ಳ ವ್ಯಕ್ತಿಯಾಗಿದ್ದಾರೆ. ಕಳೆದ 19 ವರ್ಷಗಳ ಅವಧಿಯಲ್ಲಿ ಅಧಿಕಾರ ಇಲ್ಲದಿದ್ದರೂ ಸಹ ಇವರು ಕ್ಷೇತ್ರದ ಜನರಿಂದ ವಿಮುಖರಾಗದೆ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಈಗ ಶಾಸಕರಾಗಿ 1 ಲಕ್ಷಕ್ಕೂ ಹೆಚ್ಚು ಮತಗಳಿಸುವ ಮೂಲಕ ವಿಜೇತರಾಗಿ ದಿನನಿತ್ಯ ಕ್ಷೇತ್ರವ್ಯಾಪ್ತಿ ಸಂಚಾರ ನಡೆಸಿ ವಿಶೇಷ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ನನಗೆ ಚಾಮುಲ್‌ನ ನಾಮನಿರ್ದೇಶಿತ ಸದಸ್ಯನಾಗಿ ಮಾಡಿದ್ದಾರೆ. ನಮ್ಮ ಗ್ರಾಮವಾದ ಕಮರವಾಡಿಗೆ ವಿಶೇಷ ಕಾಳಜಿ ವಹಿಸಿ ಬಸವಭವನಕ್ಕೆ 10 ಲಕ್ಷ ರೂ., ಉಪ್ಪಾರ ಬಡಾವಣೆಯ ಸಿಸಿ ಚರಂಡಿಗೆ 20 ಲಕ್ಷ, ಪರಿಶಿಷ್ಟ ಜಾತಿಯ ಬೀದಿಗೆ 20 ಲಕ್ಷ ರೂ., ಶಾಲೆಯ ದುರಸ್ತಿಗೆ 3 ಲಕ್ಷ, ಸ್ಮಶಾನದ ಅಭಿವೃದ್ಧಿ 8 ಲಕ್ಷ ರೂ. ನೀಡುವ ಮೂಲಕ ವಿಶೇಷ ಕಾಳಜಿ ವಹಿಸಿ ಅನುದಾನ ನೀಡಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ ಎಂದು ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ನಿರ್ಮಿತಿ ಕೇಂದ್ರದ ಜೆಇ ನಂದೀಶ್ ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ, ಗ್ರಾಪಂ ಅಧ್ಯಕ್ಷ ಮಹೇಶ್, ಶಿವಕುಮಾರ್, ಶಂಕರಪ್ಪ, ಕುದೇರು ರಾಜೇಂದ್ರಸ್ವಾಮಿ, ಮಹದೇವಯ್ಯ, ಸುನೀತಾರಾಜು, ಗೀತಾ, ಸುರೇಶ್, ಜಯಪ್ರಕಾಶ್ ಇತರರಿದ್ದರು.