

ಕೆ.ಎಂ.ದೊಡ್ಡಿ: ಸರ್ಕಾರದಿಂದ ಮದ್ದೂರು ಕ್ಷೇತ್ರಕ್ಕೆ ವಿಶೆೇಷ ಅನುದಾನ ತಂದು ಕಳೆದ 2 ತಿಂಗಳಿಂದ ವಿವಿಧ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುತ್ತಿದ್ದು, ಮುಂದಿನ 2 ತಿಂಗಳವರೆಗೂ ಭೂಮಿಪೂಜೆ ಮುಂದುವರಿಯಲಿವೆ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.
ಸಮೀಪದ ಲಕ್ಷ್ಮೀಗೌಡನದೊಡ್ಡಿ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಲೋಕಸರ ನಾಲಾ ವ್ಯಾಪ್ತಿಯಲ್ಲಿ ಬರುವ ಯಡಗನಹಳ್ಳಿ ಹಾಗೂ ಲಕ್ಷ್ಮೇಗೌಡನದೊಡ್ಡಿ ಗ್ರಾಮಗಳ ಅಚ್ಚುಕಟ್ಟು ಪ್ರದೇಶದಲ್ಲಿ ನಾಲಾ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರೆವೇರಿಸಿ ಮಾತಾನಾಡಿದರು.
ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸ ಕಾರ್ಯಗಳನ್ನು ವಿಶೇಷ ಅನುದಾನದ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದೆ. ರೈತರ ಹಲವು ಸಮಸ್ಯೆಗಳು ಬಗೆ ಹರಿಯುತ್ತಿದ್ದು, ಮುಂದಿನ ದಿನಗಳಲ್ಲಿ ಮದ್ದೂರು ಕ್ಷೇತ್ರ ಮಾದರಿಯಾಗುವುದು ಖಚಿತ ಎಂದು ಭರವಸೆ ನೀಡಿದರು.
ರೈತರ ಕಲ್ಯಾಣಕ್ಕಾಗಿ ಸರಕಾರದಿಂದ ಹೆಚ್ಚಿನ ಅನುದಾನ ತಂದು ನೀರಾವರಿ ಯೋಜನೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು. ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದ್ದು, ಸರ್ಕಾರದಿಂದದಿಂದ ಹೆಚ್ಚಿನ ಅನುದಾನಗಳನ್ನು ತರುವ ಮೂಲಕ ಅಭಿವೃದ್ಧಿ ಕಾರ್ಯ ನಿರಂತರವಾಗಿ ಸಾಗಲಿದೆ ಎಂದರು.
ಮದ್ದೂರು ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿ ಮತ್ತು ರೈತರ ಕಲ್ಯಾಣಕ್ಕಾಗಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು, ನಾಲೆಗಳ ಅಭಿವೃದ್ಧಿ, ಕಾಲುವೆಗಳ ನಿರ್ಮಾಣಕ್ಕಾಗಿ ಸರ್ಕಾರದಿಂದ ವಿಶೇಷ ಅನುದಾನಗಳನ್ನು ತಂದು ತಾಲೂಕಿನ ವಿವಿಧ ಭಾಗಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ ಎಂದರು.
ಸೂಳೆಕೆರೆ ಅಭಿವೃದ್ಧಿ ಹಾಗೂ ಜಲಾನಯನ ಪ್ರದೇಶಗಳ ಕಾಲುವೆಗಳ ಅಭಿವೃದ್ಧಿಗೆ ಸುಮಾರು 78 ಕೋಟಿ ರೂ. ವೆಚ್ಚದ ಕಾಮಗಾರಿ ಈಗಾಗಲೇ ಟೆಂಡರ್ ಆಗಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಮದ್ದೂರಿನ ತಾಲೂಕಿನ ಬಹುಮುಖ್ಯ ರೈತರಿಗೆ ತೊಂದರೆಯಾಗಿದ್ದ ವಿದ್ಯುತ್ ಸಂಪರ್ಕ ಸಮಸ್ಯೆಗಳನ್ನು ಮನಗಂಡು ಇಂಧನ ಸಚಿವರಿಗೆ ಮನವಿ ಮಾಡಿದ ಫಲ ನಾನು ಶಾಸಕನಾಗಿ ಆಯ್ಕೆಯಾದ ಮೇಲೆ 1 ಸಾವಿರ ಟಿ.ಸಿ (ಟ್ರಾನ್ಸ್‌ಫಾರ್ಮರ್) ಗಳನ್ನು ಮಂಜೂರು ಮಾಡಿಸಿ ತಾಲೂಕಿನಾದ್ಯಾಂತ ಅಳವಡಿಸಿದ್ದು ರೈತರ ನೆರವಿಗೆ ಮುಂದಿನ ದಿನಗಳಲ್ಲಿ ಬೋರ್‌ವೆಲ್‌ಗಳ ವಿದ್ಯುತ್ ಸಂಪರ್ಕದ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ತಿಳಿಸಿದರು.
ಬಳಿಕ ಜಿ.ಪಂ. ಮಾಜಿ ಅಧ್ಯಕ್ಷ ಬಿ. ಬಸವರಾಜು ಮಾತನಾಡಿದರು. ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಎ.ಎಸ್.ರಾಜೀವ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ದೇವಿರಮ್ಮ, ಚನ್ನೇಗೌಡ, ಮುಖಂಡರಾದ ಯಡಗನಹಳ್ಳಿ ಕೇಂಚೇಗವಡ, ಪುಟ್ಟೇಗೌಡ, ಮಂಚೇಗೌಡ, ಮಾದರಹಳ್ಳಿ ಚನ್ನಶೇಖರ್, ಮರಿಗೌಡ, ಸದಾನಂದ, ನಂದೀಶ್ ಮತ್ತಿತರಿದ್ದರು.