ಬ್ಯಾಡಗಿ ಎಪಿಎಂಸಿ ಮಾರುಕಟ್ಟೆ ಅಭಿವೃದ್ಧಿಗೆ ವಿಶೇಷ ಅನುದಾನ: ಸಚಿವ ಶಿವಾನಂದ ಪಾಟೀಲ ಭರವಸೆ

Meeting in Apmc market byadagi
Published on

ಬ್ಯಾಡಗಿ: ಪಟ್ಟಣದಲ್ಲಿ ಮುಖ್ಯರಸ್ತೆ ನಿರ್ವಿುಸುವ ಮೂಲಕ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಇಲ್ಲಿನ ಎಪಿಎಂಸಿ ಕಾರ್ಯಾಲಯದಲ್ಲಿ ಮಾರುಕಟ್ಟೆ ಬೆಳವಣಿಗೆ ಕುರಿತು ಶನಿವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಪ್ರಸಿದ್ಧಿ ಪಡೆದ ಮೆಣಸಿನಕಾಯಿ ಮಾರುಕಟ್ಟೆಗೆ ಸಾವಿರಾರು ಸಂಖ್ಯೆಯಲ್ಲಿ ರೈತರು ವ್ಯಾಪಾರಕ್ಕೆ ಬಂದು ಹೋಗುತ್ತಾರೆ. 9 ಲಕ್ಷಕ್ಕೂ ಅಧಿಕ ಕ್ವಿಂಟಾಲ್ ಮೆಣಸಿನಕಾಯಿ ಆವಕದಿಂದ ಸಾವಿರಾರು ಕೋ.ರೂ. ವ್ಯವಹಾರ ನಡೆಯುತ್ತಿದೆ. ಮಾರುಕಟ್ಟೆಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ನಬಾರ್ಡ್ ಯೋಜನೆಯಡಿ ಮಾರುಕಟ್ಟೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಬ್ಯಾಡಗಿಯಲ್ಲಿ ಹಾಯ್ದು ಹೋಗಿರುವ ಗಜೇಂದ್ರಗಡ-ಸೊರಬ ರಾಜ್ಯಹೆದ್ದಾರಿ ವಿಸ್ತರಣೆ ಆಗದೇ ಜನರಿಗೆ ತೀವ್ರ ತೊಂದರೆಯಾಗಿದೆ. ಪಟ್ಟಣದಲ್ಲಿ ಅಂದಾಜು 900 ಮೀಟರ್ ರಸ್ತೆ ವಿಸ್ತರಣೆ ಮಾತ್ರ ಬಾಕಿ ಉಳಿದಿದೆ. ಎಲ್ಲರೂ ರಸ್ತೆ ನಿಯಮ ಪಾಲಿಸಬೇಕು. ಅಧಿಕಾರಿಗಳು ಮಾಲೀಕರ ಸಹಕಾರ ಪಡೆಯಬೇಕು. ಎಲ್ಲ ಸಮಸ್ಯೆ ಪರಿಹಾರವಾದರೆ ಶೀಘ್ರದಲ್ಲೇ ರಸ್ತೆ ವಿಸ್ತರಣೆ ಮಾಡಲಾಗುವುದು ಎಂದರು.

ಮೆಣಸಿನಕಾಯಿ ಮಾರುಕಟ್ಟೆ ವಿಸ್ತರಣೆಗೊಳಿಸಲು, ಸ್ಥಳೀಯ ವರ್ತಕರು ವಿಷಯ ಪ್ರಸ್ತಾಪಿಸಿದರು. ಬಳಿಕ ಮಾರುಕಟ್ಟೆ ವಿಸ್ತರಣೆಗೆ ಸರ್ಕಾರಿ ಭೂಮಿ ಗುರುತಿಸಿ ಮಾಹಿತಿ ನೀಡುವಂತೆ ತಹಸೀಲ್ದಾರ್ ಎಸ್.ವಿ. ಪ್ರಸಾದ ಅವರಿಗೆ ಸಚಿವರು ಸೂಚಿಸಿದರು.

ಮೆಣಸಿನಕಾಯಿ ವರ್ತಕ ಸುರೇಶ ಮೇಲಗಿರಿ ಮಾತನಾಡಿ, ಮಾರುಕಟ್ಟೆ ನೂರಾರು ಎಕರೆ ವ್ಯಾಪ್ತಿಯಲ್ಲಿ ಬೆಳೆದಿದೆ. ಆದರೆ, ರೈತರ ಸಂಖ್ಯೆ ವಾರ್ಷಿಕವಾಗಿ ಏರುತ್ತಲೇ ಇದೆ. ಮೆಣಸಿನಕಾಯಿ ವ್ಯಾಪಾರಕ್ಕೆ ಮಾರುಕಟ್ಟೆಯಲ್ಲಿ ಜಾಗದ ಕೊರತೆಯಾಗಿದೆ. ಸುಮಾರು 300ಕ್ಕೂ ಹೆಚ್ಚು ವರ್ತಕರು ಅಂಗಡಿ ನಿವೇಶನಕ್ಕೆ ಬೇಡಿಕೆ ಇಟ್ಟಿದ್ದಾರೆ. ಶಿಡೇನೂರು ಗುಡ್ಡದಲ್ಲಿ 40 ರಿಂದ 60 ಎಕರೆ ಸರ್ಕಾರಿ ಜಾಗವಿದೆ. ಅದನ್ನು ಮಾರುಕಟ್ಟೆ ವಹಿವಾಟಿಗೆ ನೀಡಬೇಕು ಎಂದರು.

ಶಾಸಕರಾದ ಬಸವರಾಜ ಶಿವಣ್ಣನವರ, ಯು.ಬಿ. ಬಣಕಾರ, ಪ್ರಕಾಶ ಕೋಳಿವಾಡ, ಎಪಿಎಂಸಿ ಕಾರ್ಯದರ್ಶಿ ಎಚ್.ವೈ. ಸತೀಶ, ವಿಕಾಸ ಎಂ., ವರ್ತಕರಾದ ಚನ್ನಬಸಣ್ಣ ಹುಲ್ಲತ್ತಿ, ಅನಿಲಕುಮಾರ ದೊಡ್ಡಬೋಟಿ, ದಾನಪ್ಪ ಚೂರಿ, ಗಿರೀಶ ಇಂಡಿಮಠ, ದುರ್ಗೆಶ ಗೋಣೆಮ್ಮನವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net