

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ
ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೂ ಸೂಕ್ತ ದಾಖಲೆಗಳನ್ನು ಒದಗಿಸುವುದು, ಕಾನೂನು ನೀತಿ ನಿಯಮಗಳಂತೆ ಕಾಮಗಾರಿಗಳನ್ನು ನಡೆಸುವುದು ನಮ್ಮ ಕರ್ತವ್ಯ. ಸರಿಯಾದ ದಾಖಲೆಗಳನ್ನು ಪಡೆದುಕೊಳ್ಳದೆ ಕೆಲಸ ಮಾಡಿದರೆ ಅದು ಭ್ರಷ್ಟಾಚಾರವಾಗುತ್ತದೆ. ಇದಕ್ಕೆ ಆಸ್ಪದ ನೀಡಬಾರದು ಎಂದು ಪುತ್ತೂರು ತಾಲೂಕು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಶೆಣೈ ಹೇಳಿದರು.
ಒಳಮೊಗ್ರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪಂಚಾಯಿತಿಯ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು ಕೇಂದ್ರ ಹಣಕಾಸು ಯೋಜನೆಯ 2025-26ನೇ ಸಾಲಿನ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನರೇಗಾ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಪ್ರವೀಣ್ ಮತ್ತು ನರೇಗಾ ಯೋಜನೆಯ ತಾಲೂಕು ಅಧಿಕಾರಿ ಭರತ್‌ರಾಜ್ ಯೋಜನೆ ಕುರಿತು ಮಾಹಿತಿ ನೀಡಿದರು.
ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಒಳಮೊಗ್ರು ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 86 ಮತ್ತು 13ನೇ ಹಣಕಾಸು ಯೋಜನೆಯಡಿ 26 ಕಾಮಗಾರಿಗಳು ಉತ್ತಮ ರೀತಿಯಲ್ಲಿ ನಡೆದಿವೆ ಎಂದರು.
ಉದ್ಯೋಗ ಖಾತ್ರಿ ಯೋಜನೆಯಡಿ ನಡೆದ ಕಾಮಗಾರಿಗಳ ಕುರಿತು ಪಿಡಿಒ ಅವಿನಾಶ್ ಬಿ.ಆರ್. ಮಾಹಿತಿ ನೀಡಿದರು. ಸಾಮಾಜಿಕ ಪರಿಶೋಧನಾ ತಂಡದ ಕುಮಾರ್ ಮತ್ತು ಚಂಚಲಾಕ್ಷಿ ವರದಿ ವಾಚಿಸಿದರು. ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರಾದ ಮಹೇಶ್ ರೈ ಕೇರಿ, ವಿನೋದ್ ಶೆಟ್ಟಿ ಮುಡಾಲ, ಶೀನಪ್ಪ ನಾಯ್ಕ, ರೇಖಾ ಯತೀಶ್, ಚಿತ್ರಾ ಬಿ.ಸಿ., ಸುಂದರಿ, ನಳಿನಾಕ್ಷಿ, ಶಾರದಾ ಮತ್ತಿತರರಿದ್ದರು. ಪಂಚಾಯಿತಿ ಕಾರ್ಯದರ್ಶಿ ಜಯಂತಿ ವಂದಿಸಿದರು.
ಬೋರ್ಡ್ ಅಳವಡಿಕೆ ರಿಯಾಯಿತಿ ಆಗ್ರಹ
ನರೇಗಾ ಯೋಜನೆಯಲ್ಲಿ ಮಾಡಿರುವ ಕಾಮಗಾರಿಗಳಿಗೆ ಬೋರ್ಡ್ ಅಳವಡಿಕೆ ಕಡ್ಡಾಯ. ಆದರೆ ಕೆಲವೊಂದು ಸಣ್ಣ ಮೊತ್ತದ ಕಾಮಗಾರಿಗಳಿಗೆ ಬೋರ್ಡ್ ಅಳವಡಿಸಿದರೆ ಬೋರ್ಡ್ ಅಳವಡಿಕೆ ವೆಚ್ಚ ಹೊರೆಯಾಗುತ್ತಿದೆ. ಹಾಗಾಗಿ ಸಣ್ಣ ಮೊತ್ತದ ಕಾಮಗಾರಿಗಳಿಗೆ ಬೋರ್ಡ್ ಅಳವಡಿಕೆಯಲ್ಲಿ ರಿಯಾಯಿತಿ ನೀಡಬೇಕು. ಈ ಕುರಿತು ಸರ್ಕಾರಕ್ಕೆ ಬರೆದುಕೊಳ್ಳಬೇಕು ಎಂದು ಗ್ರಾಮಸ್ಥ ಅದ್ರಾಮ ಅಡ್ಕ ಮನವಿ ಮಾಡಿದರು.