

ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರ ಕಠಿಣ ಕಾನೂನು ಕ್ರಮ ಜಾರಿ ಮಾಡಬೇಕು ಎಂದು ಲಕ್ಕೊಂಡಹಳ್ಳಿ ಗ್ರಾಪಂ ಅಧ್ಯಕ್ಷೆ ಭಾರತಿ ದೇವರಾಜ್ ಹೇಳಿದರು.
ಹೋಬಳಿಯ ಲಕ್ಕೊಂಡಹಳ್ಳಿ ಗ್ರಾಪಂನ ಸೊಣ್ಣಹಳ್ಳಿಪುರ ಸರ್ಕಾರಿ ಶಾಲಾ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಪಂ, ತಾಪಂ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದರು. ಸಭೆಯಲ್ಲಿ ಕುಂದು-ಕೊರತೆಗಳ ಬಗ್ಗೆ ಚರ್ಚಿಸಿ, ಪಟ್ಟಿ ಮಾಡಿ, ಸೂಕ್ತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳ ಮೂಲಕ ಸರ್ಕಾರದ ಗಮನ ತರಲಾಗುವುದು ಎಂದರು.
ನೋಡಲ್ ಅಧಿಕಾರಿ ಹೇಮಲತಾ ಮಾತನಾಡಿ, ಮಕ್ಕಳ ರಕ್ಷಣೆ, ಮಕ್ಕಳ ಮೇಲಿನ ದೌರ್ಜನ್ಯ, ಅನ್ಯಾಯದ ಎದುರಿಸುವ ಕ್ರಮಗಳ ಬಗ್ಗೆ ಅತ್ಮಸ್ಥರ್ಯತುಂಬುವ ಕೆಲಸವಾಗಬೇಕು ಎಂದ ಅವರು, ಶಾಲಾ ಶಿಕ್ಷಣ ಹಾಗೂ ಶಾಲಾ ವ್ಯವಸ್ಥೆಗಳ ವಿಶ್ಲೇಷಣೆ, ಸಾಂಸ್ಕೃತಿಕ ಮತ್ತು ರಸಪ್ರಶ್ನೆ ಆಶುಭಾಷಣ ಸ್ಪರ್ಧೆ ಏರ್ಪಡಿಸುವ ಮೂಲಕ ಮಕ್ಕಳಲ್ಲಿ ವಿಶೇಷ ಜಾಗೃತಿ ಮೂಡಿಸಲು ಕಾರ್ಯಕ್ರಮ ಪೂರಕವಾಗಿದೆ ಎಂದು ಹೇಳಿದರು.
ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವುದು, ಮಕ್ಕಳ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಸಭೆಯಲ್ಲಿ ವಿಶೇಷ ಜಾಗೃತಿ ಮೂಡಿಸಲಾಗಿದೆ. ಪರೀಕ್ಷೆ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಸಾಮರ್ಥ್ಯದ ಮಾಪನ ಮಾಡಿ ಗೌರವಿಸಲಾಗಿದೆ ಎಂದುಅಲ್ಪನಹಳ್ಳಿ ಶಾಲೆ ಮುಖ್ಯಶಿಕ್ಷಕ ಡಿ.ಎಸ್.ಲೋಕೇಶ್ ತಿಳಿಸಿದರು.
ವಿಕಾಸ ಸಂಸ್ಥೆ ಅಧ್ಯಕ್ಷ ನಾಗರಾಜ್ ಮಾತನಾಡಿ, ಹೆಣ್ಣು ಮಕ್ಕಳ ಪೋಷಣೆ ಮತ್ತು ರಕ್ಷಣೆ, ಬಾಲ್ಯವಿವಾಹ ತಡೆ, ಭ್ರೂಣಹತ್ಯೆ ನಿಷೇಧ, ಬಾಲಕಾರ್ಮಿಕರ ನೇಮಕ, ಮಕ್ಕಳ ಕಳ್ಳ ಸಾಗಣೆ ವಿಚಾರವಾಗಿ ಮಾಹಿತಿ ನೀಡಿದರು.
ಗಣಿತ ಕಲಿಕಾ ಆಂದೋಲನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 7ನೇ ತರಗತಿ ವಿದ್ಯಾರ್ಥಿನಿ ಹರ್ಷಿಣಿ ಮಕ್ಕಳ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದರು.
ಮಹಿಳಾ ಮತ್ತು ಮಕ್ಕಳ ಆಯೋಗದ ಸದಸ್ಯೆ ಶಾಂತಮ್ಮ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಯೋಗೇಶ್, ಮುಖ್ಯಶಿಕ್ಷಕ ಡಿ.ಎಸ್.ಲೋಕೇಶ್, ಉಪಾಧ್ಯಕ್ಷೆ ಪಾರ್ವತಮ್ಮ, ಮಾಜಿ ಅಧ್ಯಕ್ಷ ಮುನಿ ನಂಜೇಗೌಡ, ಮುಖಂಡರಾದ ಬೈರೇಗೌಡ, ವಿನಯ್, ಮುನಿಯಮ್ಮ, ಪುಷ್ಪಾ, ಪಿಡಿಒ ಸುರೇಶ್‌ಕುಮಾರ್, ಕಾರ್ಯದರ್ಶಿ ಹರೀಂದ್ರ ಇದ್ದರು.