ಗೋಹತ್ಯೆ ನಿಂತರೆ ಜಗತ್ತಿಗಾಗದು ತೊಂದರೆ...

UDP-3-1-GoPooja
Published on

ಸುಗುಣೇಂದ್ರ ಶ್ರೀಗಳಿಂದ ಗೋ ಸಂದೇಶ

ಶ್ರೀಕೃಷ್ಣ ಮಠದಲ್ಲಿ ಸಾಮೂಹಿಕ ಪೂಜೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಗೋವಿನ ರಕ್ಷಣೆ ಆದಲ್ಲಿ ಮಾತ್ರ ಜಗತ್ತಿನ ಸಂಪತ್ತು ರಕ್ಷಿಸಿದಂತಾಗುತ್ತದೆ. ಎಲ್ಲ ದೇವತೆಗಳ ಸನ್ನಿಧಾನವಿರುವ ಗೋಹತ್ಯೆ ನಿಲ್ಲಬೇಕಿದೆ. ಗೋಹತ್ಯೆ ನಿಂತರೆ ಜಗತ್ತಿಗೆ ತೊಂದರೆಯೇ ಇರುವುದಿಲ್ಲ. ಅಧ್ಯಾತ್ಮ, ಧಾರ್ಮಿಕ, ಆರ್ಥಿಕ, ವೈದ್ಯಕೀಯ ಹಾಗೂ ಸಾಮಾಜಿಕ ದೃಷ್ಟಿಯಿಂದಲೂ ಗೋವಿನ ರಕ್ಷಣೆ ಆಗಲೇಬೇಕಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

UDP-3-1A-GoPooja
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಬಲಿಪಾಡ್ಯ ನಿಮಿತ್ತ ಶನಿವಾರ ಆಯೋಜಿಸಿದ್ದ ಸಾಮೂಹಿಕ ಗೋಸೇವೆಗೆ ಚಾಲನೆ ನೀಡಿ ಗೋ ಸಂದೇಶ ನೀಡಿದ ಶ್ರೀಗಳು, ಗೋಸೇವೆಯಿಂದ ಪುಣ್ಯ ಹಾಗೂ ಗೋಹತ್ಯೆಯಿಂದ ಪಾಪ ತಟ್ಟುತ್ತದೆ ಎಂದರು.

ಉಪಯುಕ್ತ ಪ್ರಾಣಿ

ನಿತ್ಯ ಗೋಪೂಜೆಯಿಂದ ಸಕಲ ಗ್ರಹಚಾರ ನಿವಾರಣೆ ಆಗುವುದಲ್ಲದೆ, ಶ್ರೀಕೃಷ್ಣನ ಅನುಗ್ರಹ ಲಭಿಸುತ್ತದೆ. ಇದು ಶಾಸ್ತ್ರದಲ್ಲೂ ಸಹ ಉಲ್ಲೇಖವಿದ್ದು, ಗೀತೆಯಲ್ಲೂ ಕೃಷ್ಣ ಇದನ್ನು ಹೇಳಿದ್ದಾನೆ. ಯಾರಾದರೂ ಮಾಟ, ಮಂತ್ರ-ತಂತ್ರ ಮಾಡಿದ್ದರೂ ಸಹ ಆ ದುಷ್ಟ ಶಕ್ತಿಗಳನ್ನು ತಾನು ಸ್ವೀಕರಿಸಿ ಮನೆಯ ಯಜಮಾನನನ್ನು ಕಷ್ಟದಿಂದ ಕಾಪಾಡುವ ಶಕ್ತಿ ಗೋವಿಗಿದೆ. ವೈಜ್ಞಾನಿಕವಾಗಿಯೂ ಗೋವಿಗೆ ತುಂಬ ಮಹತ್ವವಿದ್ದು, ಗೋಮೂತ್ರ ಹಾಗೂ ಗೋಮಯ ಅನೇಕ ರೋಗಗಳಿಗೆ ಔಷಧವಾಗಿದೆ. ಹೀಗಾಗಿ ಪೂಜ್ಯವೂ, ಉಪಯುಕ್ತವೂ ಆದ ಪ್ರಾಣಿ ಇದಾಗಿದೆ ಎಂದರು.

UDP-3-1B-GoPooja

ಹಾಲಿನಲ್ಲಿ ಚಿನ್ನದ ಅಂಶ

ಗೋವಿನ ಮಲ-ಮೂತ್ರಕ್ಕೆ ಮಾತ್ರ ಜಗತ್ತಿನಲ್ಲಿ ಶ್ರೇಷ್ಠತೆ ಇದೆ. ಮನುಷ್ಯನೂ ಸೇರಿದಂತೆ ಇತರೆಲ್ಲ ಪ್ರಾಣಿಗಳ ಮಲ-ಮೂತ್ರ ಹೇಯವಾಗಿದೆ. ಪುಂಗನೂರು ತಳಿಯ ಗೋವಿನ ಹಾಲಿನಲ್ಲಿ ಚಿನ್ನದ ಅಂಶ ಇದೆಯೆಂದು ಹೇಳಲಾಗುತ್ತಿದೆ. ಹೀಗಾಗಿ ನಾಶವಾಗುತ್ತಿರುವ ದೇಸೀಯ ಗೋತಳಿಗಳ ರಕ್ಷಣೆ ಮಾಡಬೇಕಿದೆ. ಕ್ರಾಸ್​ ತಳಿಗಳನ್ನು ಮಾಡಬಾರದು ಎಂದರು.

ಸಾಮೂಹಿಕ ಪೂಜೆ

ಶ್ರೀಕೃಷ್ಣ ಮಠದ ಕನಕ ಗೋಪುರದ ಕೆಳಗೆ ಪರ್ಯಾಯ ಶ್ರೀಗಳ ಉಪಸ್ಥಿತಿಯಲ್ಲಿ ಮಠದ ಪುರೋಹಿತ ರಾಘವೇಂದ್ರ ಕೊಡಂಚ ಅವರು ಗೋಪೂಜೆ ನೆರವೇರಿಸಿದರು. ನಂತರ ರಥಬೀದಿಯಲ್ಲಿ ಗೋವುಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಸಂಗೀತ ಸೇವೆಯೊಂದಿಗೆ ರಾಜಾಂಗಣದಲ್ಲಿ ಭಕ್ತರಿಗಾಗಿ ಆಯೋಜಿಸಿದ್ದ ಸಾಮೂಹಿಕ ಗೋಪೂಜೆಯಲ್ಲಿ ನೂರಾರು ಜನರು ಪಾಲ್ಗೊಂಡು ಸೇವೆ ಸಲ್ಲಿಸಿದರು.

ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್​ ಭಟ್​ ಕಾರ್ಯಕ್ರಮ ನಿರೂಪಿಸಿದರು.

ಮನೆಯಲ್ಲೇ ಗೋಸೇವೆ ಮಾಡಲು ಹೊಸ ಯೋಜನೆ

ಬದಲಾದ ಕಾಲಮಾನದಲ್ಲಿ ಮನೆಯಲ್ಲಿ ಗೋಪೂಜೆ ಮಾಡುವವರ ಸಂಖ್ಯೆ ಇಳಿಮುಖವಾಗಿದೆ. ಹೀಗಾಗಿ ದೇವಸ್ಥಾನಕ್ಕೆ, ಮಠಕ್ಕೆ ಬಂದು ಗೋಪೂಜೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಉಡುಪಿ ಶ್ರೀಕೃಷ್ಣ ಮಠದ ಒಂದು ಗೋವನ್ನು ಮನೆಗೆ ಒಯ್ದು ಒಂದೆರಡು ದಿನ ಪೂಜೆ ಮಾಡಿ ಮರಳಿ ಕೃಷ್ಣ ಮಠಕ್ಕೆ ತಂದು ಬಿಡುವಂತಹ ಹೊಸ ಯೋಜನೆ ಜಾರಿಗೊಳಿಸುತ್ತಿದ್ದೇವೆ. ನಾವುಗಳು ಟೂರ್​ ಮಾಡುವ ರೀತಿಯಲ್ಲಿ ಗೋವುಗಳೂ ಸಹ ಬೇರೆ ಬೇರೆಯವರ ಮನೆಗೆ ತೆರಳಿ ಆತಿಥ್ಯ ಸ್ವೀಕರಿಸುವ ಹೊಸ ಕಲ್ಪನೆ ಇದು. ಮನೆಯಲ್ಲಿ ಗೋಪೂಜೆ ಮಾಡಬೇಕೆಂಬ ಮನಸ್ಸಿರುತ್ತದೆ. ಆದರೆ, ಸಾಧ್ಯವಾಗುವುದಿಲ್ಲ. ಅಂಥವರಿಗಾಗಿ ಈ ವಿಶೇಷ ಸೌಲಭ್ಯ ಮಾಡಲಾಗುತ್ತಿದೆ ಎಂದು ಸುಗುಣೇಂದ್ರ ಶ್ರೀ ತಿಳಿಸಿದರು.

UDP-3-1C-GoPooja

ಪಂಚ ಗಕಾರಗಳಾದ ಗಂಗಾ, ಗಾಯತ್ರಿ, ಗೀತೆ, ಗೋವಿಂದ ಹಾಗೂ ಗೋವು ಇರುವ ಜಗತ್ತಿನ ಏಕೈಕ ತಾಣ ಉಡುಪಿಯ ಶ್ರೀಕೃಷ್ಣ ಮಠ ಮಾತ್ರ. ಗೋ ಸೇವೆಯಿಂದ ಎಲ್ಲ ಬಯಕೆ ಈಡೇರುತ್ತದೆ. ಬಯಸಿದ್ದನ್ನು ಕರುಣಿಸುವ ಕಲಿಯುಗದ ಕಾಮಧೇನು ಗೋವಾಗಿದ್ದು, ಪ್ರತಿಯೊಬ್ಬರೂ ಮನೆಯಲ್ಲಿ ಕನಿಷ್ಠ ಒಂದು ಗೋವನ್ನಾದರೂ ಸಾಕಬೇಕು. | ಸುಶ್ರೀಂದ್ರ ತೀರ್ಥ ಶ್ರೀಪಾದರು. ಕಿರಿಯ ಪಟ್ಟದ ಶ್ರೀ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net