

ಮೈಸೂರು: ನಾಡಹಬ್ಬ ದಸರಾ ಉತ್ಸವದ ಜಂಬೂಸವಾರಿ ಮೆರವಣಿಗೆಯ ತಾಲೀಮು ನಡೆಸುತ್ತಿರುವ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆಯ ಆರೋಗ್ಯ ಹಾಗೂ ಸಾಮರ್ಥ್ಯ ವೃದ್ಧಿಗೆ ಪೌಷ್ಟಿಕಾಂಶದಿಂದ ಕೂಡಿದ ವಿಶೇಷ ಆಹಾರ ನೀಡಲಾಗುತ್ತಿದೆ ಎಂದು ಡಿಸಿಎಫ್ ಡಾ.ಐ.ಬಿ.ಪ್ರಭು ಗೌಡ ಹೇಳಿದರು.
ನಗರದ ಅರಮನೆ ಆವರಣದಲ್ಲಿ ದಸರಾ ಆನೆಗಳಿಗೆ ಶನಿವಾರ ವಿಶೇಷ ಆಹಾರ ನೀಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆನೆಗಳು ಬೆಳಗ್ಗೆ ಹಾಗೂ ಸಂಜೆ ಪ್ರತಿನಿತ್ಯ 10 ರಿಂದ 12 ಕಿಲೋ ಮೀಟರ್ ನಡೆದು ವ್ಯಾಯಾಮ ಮಾಡುತ್ತಿವೆ. ಇಷ್ಟು ದೂರ ಕ್ರಮಿಸಲು ಆನೆಗಳಿಗೆ ಶಕ್ತಿಯ ಅವಶ್ಯಕತೆ ಇದೆ. ಅಲ್ಲದೆ, ಜಂಬೂಸವಾರಿ ಮೆರವಣಿಗೆ ಸಂದರ್ಭ ಅಂಬಾರಿ ಆನೆ ಅಭಿಮನ್ಯು 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಬೇಕಾಗಿದೆ. ಅಲ್ಲದೆ, ಅಭಿಮನ್ಯುವಿನೊಂದಿಗೆ ಇತರೆ ಆನೆಗಳು ಸಹ ಭಾರ ಹೊರುವ ತಾಲೀಮು ನಡೆಸುತ್ತವೆ. ನೂರಾರು ಕೆ.ಜಿ. ಭಾರವನ್ನು ಹೊರಲು ಅವುಗಳಿಗೆ ಶಕ್ತಿಯ ಅವಶ್ಯಕತೆ ಇದೆ. ಹಾಗಾಗಿ ವಿಶೇಷ ಆಹಾರ ನೀಡಲಾಗುತ್ತಿದೆ ಎಂದರು.
ಆನೆಗಳ ಸಾಮರ್ಥ್ಯವೃದ್ಧಿಗೆ ಹಸಿರುಕಾಳು, ಕುಸುಬಲಕ್ಕಿ, ಉದ್ದಿನಕಾಳು, ಈರುಳ್ಳಿ, ಅವಲಕ್ಕಿ, ಕಾಳು, ಬೆಲ್ಲ, ಕಬ್ಬು, ಭತ್ತ, ತೆಂಗಿನಕಾಯಿ, ತರಕಾರಿ ಮಿಶ್ರಣದ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಗಂಡಾನೆಗಳಿಗೆ ಪ್ರತಿನಿತ್ಯ 750 ಕೆ.ಜಿ.ಮತ್ತು ಹೆಣ್ಣಾನೆಗೆ 550 ರಿಂದ 600 ಕೆ.ಜಿ. ಮೇವನ್ನು ನೀಡಲಾಗುವುದು. ಹಸಿರುಕಾಳು, ಹುರುಳಿಕಾಳು, ಕುಸುಬುಲಕ್ಕಿ, ತರಕಾರಿಗಳನ್ನು 6 ರಿಂದ 7 ಗಂಟೆ ಬೇಯಿಸಿ ನೀಡಲಾಗುವುದು. ಭತ್ತದ ಹುಲ್ಲು ಹಾಗೂ ಭತ್ತ ಸೇರಿ 25 ಕೆ.ಜಿ. ನೀಡಲಾಗುವುದು. ವಿಶೇಷ ಮೇವನ್ನು ನಿತ್ಯ ಗಂಡಾನೆಗೆ 10 ರಿಂದ 12 ಕೆ.ಜಿ ನೀಡಲಾಗುವುದು. ಹೆಣ್ಣಾನೆಗೆ 2 ಕೆ.ಜಿ.ಯಷ್ಟು ಕಡಿಮೆ ನೀಡಲಾಗುವುದು. ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮೇವು ನೀಡಿದರೆ ಆನೆಗಳ ವ್ಯಾಯಾಮಕ್ಕೆ ಸಮಸ್ಯೆಯಾಗಲಿದೆ ಎಂದರು.
ಆನೆಗಳಿಗೆ ಹೊಟ್ಟೆ ತುಂಬುವಷ್ಟು ಹುಲ್ಲು, ಸೊಪ್ಪು ನೀಡಲಾಗುತ್ತದೆ. ಬೆಳಗ್ಗೆ 6.30 ಮತ್ತು ರಾತ್ರಿ 7ಕ್ಕೆ ಹಸಿರುಕಾಳು, ಕುಸುಬಲಕ್ಕಿ, ಉದ್ದಿನಕಾಳು, ಈರುಳ್ಳಿ, ಗೋ, ಅವಲಕ್ಕಿ, ತರಕಾರಿ ಮಿಶ್ರಣದ ಆಹಾರ ನೀಡಲಾಗುತ್ತದೆ. ಸಂಜೆ ಸ್ವಲ್ಪ ಪ್ರಮಾಣದಲ್ಲಿ ಭತ್ತ, ತೆಂಗಿನಕಾಯಿ, ಒಂದೆರಡು ಬೆಲ್ಲ, ಭತ್ತದ ಒಣಹುಲ್ಲಿನ ಜತೆ ಹಿಂಡಿ, ಹುರುಳಿ ಮತ್ತು ರಾಗಿಯನ್ನು ನೀಡಲಾಗುವುದು ಎಂದರು.