

ಅವಳಿನಗರಕ್ಕೆ ಬರಲಿದೆ ವಿಶೇಷ ಆರ್ಥಿಕ ವಲಯ
ವಿಜಯವಾಣಿ ಸುದ್ದಿಜಾಲ ಧಾರವಾಡ
ಹುಬ್ಬಳ್ಳಿ-ಧಾರವಾಡ ಅವಳಿನಗರಕ್ಕೆ ವಿಶೇಷ ಆರ್ಥಿಕ ವಲಯ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಇದರಿಂದ ಅವಳಿನಗರಕ್ಕೆ ಆರ್ಥಿಕ ಚೈತನ್ಯ ತುಂಬುವ ಕೆಲಸವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಕಡಪಾ ಮೈದಾನದಲ್ಲಿ ಹು-ಧಾ ಮಹಾನಗರ ಪಾಲಿಕೆಯ 1.60 ಕೋಟಿ ರೂ. ಅನುದಾನದ ಮಳೆ ನೀರು ಕೊಯ್ಲು ಥೀಮ್ ಪಾರ್ಕ್ ಹಾಗೂ ಮೈದಾನ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸ್ಮಾರ್ಟ್ ಸಿಟಿ ಯೋಜನೆ ಅಡಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಂದ ಹು-ಧಾ ಅಭಿವೃದ್ಧಿಯತ್ತ ಸಾಗಿದೆ. ಈ ವಲಯಕ್ಕೆ ಆರ್ಥಿಕ ಬಲ ನೀಡುವ ಕೆಲಸವಾಗಬೇಕಿದೆ. ಹೀಗಾಗಿ ವಿಶೇಷ ಆರ್ಥಿಕ ವಲಯ ತರಲು ಪ್ರಯತ್ನಗಳು ನಡೆದಿದ್ದು, ಪ್ರಸ್ತಾವನೆ ಪ್ರಗತಿ ಹಂತದಲ್ಲಿದೆ. ಶೀಘ್ರ ವಲಯ ಸ್ಥಾಪನೆ ಆಗುವ ಭರವಸೆ ಇದೆ ಎಂದರು.
ಕಡಪಾ ಮೈದಾನ ಇತಿಹಾಸದ ಪುಟದಲ್ಲಿ ವಿಶೇಷ ಸ್ಥಾನ ಪಡೆದಿದೆ. ಮಾಜಿ ಪ್ರಧಾನ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಉಪ ಪ್ರಧಾನಿ ಲಾಲ್ಕೃಷ್ಣ ಅಡ್ವಾಣಿಯಂತಹ ದಿಗ್ಗಜರು ಭಾಷಣ ಮಾಡಿದ ನೆಲವಿದು. ಅರವಿಂದ ಬೆಲ್ಲದ ಆಸಕ್ತಿಯಿಂದ ಈ ಮೈದಾನ ಅಂದಗೊಳಿಸುವ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಸಿಕ್ಕಿರುವುದು ಖುಷಿ ಸಂಗತಿ. ಆದರೆ ಶುಚಿತ್ವ, ರಕ್ಷಣೆಗೆ ಸಮುದಾಯದ ಸಹಭಾಗಿತ್ವವೂ ಅಗತ್ಯ ಎಂದರು.
ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಗೋಕಾಕ ಚಳವಳಿಗೆ ನಾಂದಿ ಹಾಡಿದ ನೆಲ ಧಾರವಾಡದ ಕಡಪಾ ಮೈದಾನ. ಆದರೆ ಈ ಜಾಗ ಕಸ ಸಂಗ್ರಹಣಾ ವಾಹನಗಳ ನಿಲುಗಡೆಗೆ ಸೀಮಿತವಾಗಿ ಹಾಳಾಗುತ್ತಿತ್ತು. ಇದೀಗ ಮೈದಾನದ ಅಭಿವೃದ್ಧಿಗೆ ಚಾಲನೆ ಸಿಕ್ಕಿದ್ದು, ಶೀಘ್ರದಲ್ಲಿ ಅಂದ ಹೆಚ್ಚಲಿದೆ ಎಂದರು.
ಪಾಲಿಕೆ ಸದಸ್ಯರಾದ ಶಿವು ಹೀರೆಮಠ, ಸುರೇಶ ಬೇದರೆ, ವಿಷ್ಣುತಿರ್ಥ ಕೊರ್ಲಹಳ್ಳಿ, ಶಂಕರ ಶೇಳಕೆ, ಮುಖಂಡರಾದ ಸಂಜಯ ಕಪಟಕರ, ಪಿ.ಎಚ್. ನೀರಲಕೇರಿ, ನಾಗರಾಜ್ ಗುರಿಕಾರ, ಮೋಹನ ರಾಮದುರ್ಗ, ಪೂರ್ಣಾ ಪಾಟೀಲ, ಶಕ್ತಿ ಹಿರೇಮಠ, ಅನುಸೂಯಾ ಹಿರೇಮಠ, ಮಾಲತಿ ಹುಲಿಕಟ್ಟಿ, ಪುಷ್ಪಾ ಮಜ್ಜಗಿ, ಸುಜಾತಾ ಕಳ್ಳಿಮನಿ, ಪುಷ್ಪಾ ನವಲಗುಂದ, ರೂಪಾ ಚೌಧರಿ, ಇತರರು ಇದ್ದರು.