ಇಟಗಟ್ಟಿಯಲ್ಲಿ ಇಲೆಕ್ಟ್ರಾನಿಕ್ಸ್ ಘಟಕಗಳಿಗಾಗಿ ವಿಶೇಷ ಆರ್ಥಿಕ ವಲಯ

Pralhad Joshi 3
Published on

ಹುಬ್ಬಳ್ಳಿ : ಧಾರವಾಡದ ಇಟ್ಟಿಗಟ್ಟಿಯಲ್ಲಿ ಏಕಸ್ ಇನ್​ಫ್ರಾದ ಹುಬ್ಬಳ್ಳಿ ಡ್ಯೂರಬಲ್ ಗೂಡ್ಸ್ ಕ್ಲಸ್ಟರ್ ಪ್ರೖೆವೇಟ್ ಲಿಮಿಟೆಡ್ ಪ್ರಸ್ತಾಪಿಸಿದ ಇಲೆಕ್ಟ್ರಾನಿಕ್ ಘಟಕಗಳಿಗಾಗಿ ವಿಶೇಷ ಆರ್ಥಿಕ ವಲಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಅಧಿಕೃತವಾಗಿ ಗೆಜೆಟ್​ನಲ್ಲಿ ಪ್ರಕಟಿಸಿದೆ.

ಈ ಭಾಗದಲ್ಲಿ ಇಲೆಕ್ಟ್ರಾನಿಕ್ಸ್ ಘಟಕಗಳ ಅವಶ್ಯಕತೆ ಮನಗಂಡು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ ಗೋಯಲ್ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ವಿನಂತಿಸಿದ್ದರು.

ಜೋಶಿಯವರ ವಿನಂತಿಯ ಮೇರೆಗೆ ಇಲೆಕ್ಟ್ರಾನಿಕ್ ಘಟಕಗಳಿಗಾಗಿ ವಿಶೇಷ ಆರ್ಥಿಕ ವಲಯವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ ಗೋಯಲ್ ಘೋಷಿಸಿದ್ದಾರೆ.

ಒಟ್ಟು 391 ಎಕರೆ ಭೂಮಿಯನ್ನು ಹೊಂದಿರುವ ಏಕಸ್ ಇನ್​ಫ್ರಾದ ಹುಬ್ಬಳ್ಳಿ ಡ್ಯೂರಬಲ್ ಗೂಡ್ಸ್ ಕ್ಲಸ್ಟರ್​ನಲ್ಲಿ ಈಗ 28 ಎಕರೆ ಭೂಮಿಯನ್ನು ಇಲೆಕ್ಟ್ರಾನಿಕ್ಸ್ ವಿಶೇಷ ಆರ್ಥಿಕ ವಲಯ ಎಂದು ಘೊಷಿಸಲಾಗಿದ್ದು, ಬರುವ ದಿನಗಳಲ್ಲಿ ಹೊಸ ಇಲೆಕ್ಟ್ರಾನಿಕ್ಸ್ ಉದ್ಯಮಗಳು ಬರುವಂತೆ ವಿಶೇಷ ಆರ್ಥಿಕ ವಲಯದ ವಿಸ್ತರಣೆ ಮಾಡುವ ಅವಕಾಶವಿದೆ.

ಹುಬ್ಬಳ್ಳಿ -ಧಾರವಾಡದ ಕೈಗಾರಿಕಾ ಪ್ರದೇಶದಲ್ಲಿ ಇಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಗೆ ಈ ವಿಶೇಷ ಆರ್ಥಿಕ ವಲಯ ಉತ್ತೇಜನ ನೀಡಲಿದೆ. ಇದು ಹುಬ್ಬಳ್ಳಿಯನ್ನು ಜಾಗತಿಕ ಇಲೆಕ್ಟ್ರಾನಿಕ್ಸ್ ಉತ್ಪಾದನೆಯ ಶಕ್ತಿ ಕೇಂದ್ರವಾಗಿ ಪರಿವರ್ತಿಸುವ ನಿರ್ಣಾಯಕ ಹೆಜ್ಜೆಯಾಗಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net