ಜಿಲ್ಲೆಯಲ್ಲಿ ವಿಶೇಷ ನ್ಯಾಯಾಲಯ

CTD DC MEETING-----
Published on

ಚಿತ್ರದುರ್ಗ: ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ದಾಖಲಾದ ಪ್ರಕರಣಗಳ ತ್ವರಿತ ವಿಚಾರಣೆ, ವಿಲೇವಾರಿಗೆ ಜಿಲ್ಲೆಯಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಸರ್ಕಾರಕ್ಕೆ ಪ್ರಸ್ತವಾನೆ ಸಲ್ಲಿಸಲಾಗುವುದೆಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಡಿಸಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿ, ಪ್ರತಿದೂರು ದಾಖಲು, ಮೇಲ್ಮನವಿ ಹಾಗೂ ವಿಚಾರಣೆ ವಿಳಂಬದಿಂದ ಪ್ರಕರಣಗಳ ವಿಲೇವಾರಿ ಪ್ರಮಾಣ ಕಡಿಮೆಯಾಗಿದೆ. ಸಂತ್ರಸ್ತರಿಗೆ ಕಾಲಮಿತಿಯಲ್ಲಿ ನ್ಯಾಯ ಒದಗಿಸಲು ವಿಶೇಷ ನ್ಯಾಯಾಲಯದ ಅಗತ್ಯವಿದೆ. ಪೋಕ್ಸೋ,ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ಬೇರೆ ಜಿಲ್ಲೆಗಳಲ್ಲಿ ಪ್ರತ್ಯೇಕ ವಿಶೇಷ ನ್ಯಾಯಾಲಯಗಳಿವೆ. ನಮ್ಮ ಜಿಲ್ಲೆಯಲ್ಲೂ ಇದೇ ಮಾದರಿ ನ್ಯಾಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಕಳೆದ ಮೇ ಅಂತ್ಯಕ್ಕೆ 129 ದೌರ್ಜನ್ಯ ಪ್ರಕರಣಗಳು, ಏಪ್ರಿಲ್‌ನಲ್ಲಿ 128 ಬಾಕಿ ಇವೆ. 2 ಹೊಸ ಪ್ರಕರಣಗಳ ಸಹಿತ 130 ವಿಚಾರಣೆ ಹಂತದಲ್ಲಿವೆ. 1ರಲ್ಲಿ ಶಿಕ್ಷೆಯಾಗಿದೆ. 2 ಪ್ರಕರಣಗಳಲ್ಲಿ ಆರೋಪಿತರ ಖುಲಾಸೆಯಾಗಿದೆ. ಮೇನಲ್ಲಿ 2 ದೌರ್ಜನ್ಯ ಪ್ರಕರಣಗಳು ಹೊಸದಾಗಿ ದಾಖಲಾಗಿವೆ ಎಂದು ಸರ್ಕಾರಿ ಅಭಿಯೋಜಕಿ ನಾಗವೇಣಿ ಮಾಹಿತಿ ನೀಡಿದರು.

ದೌರ್ಜನ್ಯ ಪ್ರಕರಣಗಳ ಶೀಘ್ರ ವಿಲೇವಾರಿಗೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದಿಂದ ಪ್ರತ್ಯೇಕ ವಿಶೇಷ ಪೊಲೀಸ್ ಠಾಣೆ ಸ್ಥಾಪನೆಯಾಗಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಂತ್ರಸ್ತರು ನೇರ ಈ ಠಾಣೆಗೆ ದೂರು ಸಲ್ಲಿಸಬಹುದು. ಹತ್ತಿರದ ಠಾಣೆಗೆ ಸಲ್ಲಿಸಿದರೂ ವಿಶೇಷ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸಲಾಗುವುದು. ಪ್ರಕರಣ ದಾಖಲಾದ ಕೂಡಲೇ ವಿಶೇಷ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಕಾನೂನು ಕ್ರಮ ಕೈಗೊಳ್ಳಲಿದ್ದಾರೆೆಂದು ಡಿವೈಎಸ್‌ಪಿ ಕೆ.ದಿನಕರ್ ತಿಳಿಸಿದರು.

ದಾಖಲಾದ ಪ್ರಕರಣಗಳ ಪೈಕಿ 2 ರಲ್ಲಿ ಬಿ. ರಿಪೋರ್ಟ್ ದಾಖಲಿಸಲಾಗಿದೆ. 2ನ್ನು ಬೇರೆ ಜಿಲ್ಲೆಗೆ ವರ್ಗಾಯಿಸಲಾಗಿದೆ. 8 ತನಿಖೆ ಹಂತದಲ್ಲಿವೆ. 15ಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದರು.

ಕಳೆದ ಜನವರಿಯಿಂದ ಜೂನ್‌ವರೆಗೆ ದಾಖಲಾಗಿರುವ 24ರಲ್ಲಿ 21 ಪರಿಶಿಷ್ಟ ಜಾತಿ ಹಾಗೂ 3 ಪರಿಶಿಷ್ಟ ವರ್ಗಕ್ಕೆ ಸೇರಿದ ಪ್ರಕರಣಗಳಾಗಿವೆ. 17,27,336 ರೂ. ಪರಿಹಾರ ನೊಂದವರಿಗೆ ಕೊಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ತಿಳಿಸಿದರು.

ಅಕ್ರಮ ಮದ್ಯ ಮಾರಾಟ ವಿರುದ್ಧ ಕ್ರಮಕ್ಕೆ, ಬಿತ್ತನೆ ಬೀಜದ ಸಂಗ್ರಹಣೆ ಕುರಿತು ತರಬೇತಿ ನೀಡಬೇಕೆಂದು ಸಮಿತಿ ಸದಸ್ಯರು ಸಲಹೆ ನೀಡಿದರು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು. ವಲಸೆ ಹೋದ ಮಕ್ಕಳನ್ನೂ ಪತ್ತೆ ಹಚ್ಚಬೇಕು. ಬಾಲ ಕಾರ್ಮಿಕರ ಪತ್ತೆಗೆ ದಿಢೀರ್ ದಾಳಿ ನಡೆಸಬೇಕು. ಬಾಲ್ಯವಿವಾಹ, ಬಾಲ ಗರ್ಭಿಣಿ, ತಾಯಿ ಹಾಗೂ ಶಿಶು ಮರಣ ಪ್ರಮಾಣ ತಗ್ಗಿಸಲು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದ ಡಿಸಿ, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕದಿದ್ದರೆ ಶಿಸ್ತುಕ್ರಮ ಜರುಗಿಸುವುದಾಗಿ ಅಬಕಾರಿ ಇಲಾಖೆ ಅಧಿಕಾರಿಗಳನ್ನು ಎಚ್ಚರಿಸಿದರು.

ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಅನುದಾನ ಬಿಡುಗಡೆಯಾಗಲಿದೆ ಎಂದು ಡಿಸಿ ತಿಳಿಸಿದರು.

ಜಿಪಂ ಸಿಇಒ ಎಸ್.ಜೆ. ಸೋಮಶೇಖರ್,ಸಿಪಿಒ ಗಾಯತ್ರಿ, ಸಮಿತಿ ಸದಸ್ಯರಾದ ಗುಜ್ಜಾರಪ್ಪ, ಎಂ.ಡಿ. ನವಕೋಟಿ, ಡಿ.ಒ. ಮುರಾರ್ಜಿ, ಬೋರಸ್ವಾಮಿ, ಹೇಮೇಗೌಡ, ಡಿಡಿಪಿಐ ಎಂ.ಆರ್. ಮಂಜುನಾಥ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಇತರರು ಇದ್ದರು.

ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಆಶ್ರಿತ ಸಂಸ್ಥೆ ಹೊರ ತಂದಿರುವ ಭಿತ್ತಿ ಚಿತ್ರಗಳನ್ನು ಡಿಸಿ ಬಿಡುಗಡೆ ಮಾಡಿದರು. ಸಂಸ್ಥೆಯ ತಿಪ್ಪೇಸ್ವಾಮಿ, ಹರ್ಷವರ್ಧನ್, ಚಂದ್ರಣ್ಣ, ದೇವೀರಮ್ಮ ಇತರರು ಇದ್ದರು.

ತಾಲೂಕು ಮಟ್ಟದಲ್ಲಿ ಕುಂದು ಕೊರತೆ ಸಭೆ

ಎಸಿ ನೇತೃತ್ವದಲ್ಲಿ ತಂಡ ರಚಿಸಿ, ತಾಲೂಕು ಮಟ್ಟದಲ್ಲಿ ಕುಂದು ಕೊರತೆ ಸಭೆಗಳನ್ನು ನಡೆಸಲು ಆದೇಶಿಸುವುದಾಗಿ ಡಿಸಿ ಹೇಳಿದರು.ಪರಿಶಿಷ್ಟ ಜಾತಿ ಹಾಗೂ ಪಂಗಡ, ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳ ಜನರೊಂದಿಗೆ ಕುಂದುಕೊರತೆ ಸಭೆ ನಡೆಸಿ ಮಾತನಾಡಿದ ಅವರು, ಮುಂದಿನ ತಿಂಗಳಿಂದ ಪ್ರತಿ ತಾಲೂಕಲ್ಲಿ ಸಭೆಗಳನ್ನು ಆಯೋಜಿಸಿ ಅಹವಾಲು ಸ್ವೀಕರಿಸುವುದಾಗಿ ತಿಳಿಸಿದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net