

ಬೆಂಗಳೂರು: ಸಿಲಿಕಾನ್ ಸಿಟಿಗೆ ಮೂಲಭೂತ ಸಮಸ್ಯೆ ಆಗಿರುವ ಟ್ರಾಫಿಕ್ ಜಾಮ್ ನಿವಾರಿಸಲು ನಗರ ಸಂಚಾರ ವಿಭಾಗಕ್ಕೆ ಎಡಿಜಿಪಿ ದರ್ಜೆಯ ವಿಶೇಷ ಆಯುಕ್ತರ ಹುದ್ದೆಯನ್ನು ಹೊಸದಾಗಿ ಸೃಷ್ಟಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ನಗರ ಸಂಚಾರ ವಿಭಾಗದ ವಿಶೇಷ ಆಯುಕ್ತರಾಗಿ ಎಡಿಜಿಪಿ ಡಾ. ಎಂ.ಎ.ಸಲೀಂ ಅವರನ್ನು ನೇಮಿಸಲಾಗಿದ್ದು, ಪ್ರಸ್ತುತ ಜಂಟಿ ಪೊಲೀಸ್ ಆಯುಕ್ತರ ಹುದ್ದೆಯನ್ನು ಎಸ್‌ಪಿ ದರ್ಜೆಗೆ ಇಳಿಸಿ ಎಂ.ಎನ್. ಅನುಚೇತ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಇದೇ ವೇಳೆ ರಾಜ್ಯ ಪೊಲೀಸ್ ಇಲಾಖೆ ಆಡಳಿತ ವಿಭಾಗಕ್ಕೆ ಎಡಿಜಿಪಿ ಉಮೇಶ್ ಕುಮಾರ್, ಮಾನವ ಹಕ್ಕುಗಳ ಆಯೋಗದ ಐಜಿಪಿಯಾಗಿ ದೇವ್ಯಾಜೋತಿ ರಾಯ್, ರಾಜ್ಯ ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿ ರಮನ್ ಗುಪ್ತಾ, ಸಿಐಡಿ ಐಜಿಪಿಯಾಗಿ ಡಾ.ಬಿ.ಆರ್. ರವಿಕಾಂತೇಗೌಡ, ಬಳ್ಳಾರಿ ವಲಯ ಐಜಿಪಿಯಾಗಿ ಬಿ.ಎಸ್. ಲೋಕೇಶ್ ಕುಮಾರ್, ಪಶ್ಚಿಮ ವಲಯ ಐಜಿಪಿಯಾಗಿ ಡಾ. ಚಂದ್ರಗುಪ್ತಾ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾಗಿ ಡಾ. ಶರಣಪ್ಪ, ಕಿಯೋನಿಸ್ಕ್ ಎಂಡಿಯಾಗಿ ರವಿ ಡಿ. ಚೆನ್ನಣನವರ್, ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಬಿ. ರಮೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ.