

ಪ್ರಶಾಂತ ಭಾಗ್ವತ ಉಡುಪಿ
ಬೆಳಕಿನ ಹಬ್ಬ ದೀಪಾವಳಿಯೆಂದರೆ ಇತರೆಲ್ಲ ಹಬ್ಬಗಳಿಗಿಂತಲೂ ವಿಶಿಷ್ಟ ಹಾಗೂ ವಿಭಿನ್ನ. ದೇಶದ ವಿವಿಧ ಭಾಗಗಳಲ್ಲಿ ದೀಪಾವಳಿಯು ಪ್ರಾದೇಶಿಕವಾಗಿಯೂ ಸಹ ಬೇರೆ ಬೇರೆ ರೀತಿಯಲ್ಲಿ ಆಚರಣೆಗೊಳ್ಳುತ್ತವೆ.
ರಾಜ್ಯದ ಕರಾವಳಿ ಭಾಗವಾದ ಉಡುಪಿ ಜಿಲ್ಲೆಯಲ್ಲೂ ಸಹ ಕೃಷಿಕರು ದೀಪಾವಳಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸುತ್ತಾರೆ. ಈ ಭಾಗದ ರೈತರು ಗದ್ದೆಗೆ ಹೋಗಿ ಭತ್ತದ ಹೊಸ ಫಸಲನ್ನು ಮನೆಗೆ ತಂದು ಸಂಭ್ರಮಿಸುವುದಲ್ಲದೆ, ಬಲೀಂದ್ರನನ್ನು ಕರೆದು ಪೂಜಿಸುತ್ತಾರೆ.
ದೀಪಾವಳಿಯ ಎರಡನೇಯ ದಿನ ತಮ್ಮಗದ್ದೆಗಳಿಗೆ ಹೋಗಿ ಭತ್ತದ ತೆನೆಗಳಿಗೆ ಪೂಜಿಸುತ್ತಾರೆ. ಭೂಮಿಗೂ (ಭೂದೇವಿ) ಸಹ ಮಂಗಳಾರತಿ ಮಾಡುತ್ತಾರೆ. ಬಳಿಕ, ಕರಾವಳಿ ಭಾಗವನ್ನು ಆಳಿದ ಅರಸನೂ ಆಗಿದ್ದ ಎಂಬ ನಂಬಿಕೆಯಿಂದ ಪಾತಾಳದಲ್ಲಿರುವ ಬಲೀಂದ್ರನನ್ನು ಹೊಗಳಿ ಮೇಲೆ ಬರುವಂತೆ ಕರೆಯುತ್ತಾರೆ. ತಮ್ಮದೇ ಭಾಷೆಯಲ್ಲಿ ಹೊಲಿ ಕೊಟ್ರೋ, ಬಲಿ ತಗಂಡ್ರೋ, ಬಲಿನ್ ದೇವರ್ ತಮ್ಮ್ ರಾಜ್ಯಕ್ಕೆ ತಾವೇ ಬಂದ್ರೋ, ಬಲಿಯೇ ಬಾ... ಕೂ ಕೂ ಕೂ ಎಂದು ಪ್ರಾರ್ಥಿಸುತ್ತಾರೆ.
ಉಡುಪಿ ಜಿಲ್ಲೆಯ ಸಿದ್ದಾಪುರ ಭಾಗದ ಕೃಷಿಕರು ಬಲೀಂದ್ರ ಪೂಜೆಯನ್ನು ವಿಶೇಷವಾಗಿ ಆಚರಿಸುತ್ತೇವೆ. ಬಲಿ ಚಕ್ರವರ್ತಿಗಾಗಿ ದಾನವನಾಗಿದ್ದರೂ ಸಹ ಪ್ರಜಾಪಾಲಕನೇ ಆಗಿದ್ದನು. ವಾಮನ ಅವತಾರಿ ವಿಷ್ಣುವಿನ ವರದಂತೆ ದೀಪಾವಳಿಯಲ್ಲಿ ಒಂದು ದಿನ ಮತ್ತೆ ಭೂಮಿಗೆ ಆತ ಬರುತ್ತಾನೆಂಬ ನಂಬಿಕೆ ಇದೆ. ನಾರುಕೋಲಿನಿಂದ ತಯಾರಿಸಿದ ದೀಪ ಹಚ್ಚಿ, ವಿವಿಧ ಬಗೆಯ ಹೂವುಗಳಿಂದ ಭೂಮಿಗೆ ಪೂಜಿಸುತ್ತೇವೆ. ಊರು ಮುಳ್ಳುಸೌತೆ ಕಾಯಿ, ಅರಿಶಿನ ಎಲೆಯಿಂದ ಮಾಡಿದ ಹಿಟ್ಟು, ವೀಳ್ಯದೆಲೆ, ಅಡಕೆಯನ್ನು ಗದ್ದೆಗೆ ಸಮರ್ಪಿಸಿ ಬಲೀಂದ್ರ ದೇವರನ್ನು ಕರೆಯುವ ಸಂಪ್ರದಾಯ ನಮ್ಮ ಭಾಗದಲ್ಲಿ ಆಚರಣೆಯಲ್ಲಿದೆ. | ರಾಜೇಂದ್ರ ಬೆಚ್ಚಳ್ಳಿ. ಸಿದ್ದಾಪುರದ ಭತ್ತ ಕೃಷಿಕ.