

ಮಂಡ್ಯ: ಜನರ ಒಳಿತಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಕಾಂಗ್ರೆಸ್ ಸರ್ಕಾರದ ಶಾಸಕರಾಗಿರುವ ತಾವು ಕ್ಷೇತ್ರದ ಅಭಿವೃದ್ಧಿಗಾಗಿ ಏನೆಲ್ಲ ಕ್ರಮ ಕೈಗೊಂಡಿದ್ದೀರಿ?. ಎಷ್ಟು ಅನುದಾನ ತಂದಿದ್ದೀರಿ ಎಂಬುದನ್ನು ಮತದಾರರಿಗೆ ಉತ್ತರ ನೀಡುವಂತೆ ಒತ್ತಾಯಿಸಿ ಶಾಸಕ ರವಿಕುಮಾರ್ ಗಣಿಗ ಅವರಿಗೆ ಬಿಜೆಪಿ ಕಾರ್ಯಕರ್ತರು ಶನಿವಾರ ಮನವಿ ಸಲ್ಲಿಸಿದರು.
ವಿಶೇಷ ಅಭಿಯಾನದ ಅಂಗವಾಗಿ ನಗರದ ಶಾಸಕರ ಕಚೇರಿಗೆ ತೆರಳಿ ಆಪ್ತ ಸಹಾಯಕರಿಗೆ ಮನವಿ ಸಲ್ಲಿಸಿರುವ ಕಾರ್ಯಕರ್ತರು, ಗ್ಯಾರಂಟಿ ಯೋಜನೆ, ಕ್ಷೇತ್ರ ಅಭಿವೃದ್ಧಿ ಕುರಿತಂತೆ ಮತದಾರರಿಗೆ ಮಾಹಿತಿ ನೀಡುವುದು ಶಾಸಕರ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಮತದಾರರಿಗೆ ಉತ್ತರ ನೀಡುವಂತೆ ಮನವಿ ಸಲ್ಲಿಸಲಾಯಿತು. ಶಾಸಕರಾದ ನಂತರ ಕ್ಷೇತ್ರಕ್ಕೆ ಬಿಡುಗಡೆಯಾಗಿರುವ ಅನುದಾನವೆಷ್ಟು?. ಆ ಹಣದಲ್ಲಿ ಏನೆಲ್ಲ ಕೆಲಸ ಮಾಡಿದ್ದೀರಿ. ಕ್ಷೇತ್ರದಲ್ಲಿ ಬರದ ದವಡೆಗೆ ಸಿಲುಕಿ ನಲುಗಿರುವ ರೈತರಿಗೆ ಸರ್ಕಾರದಿಂದ ಬಿಡುಗಡೆ ಮಾಡಿಸಿರುವ ಪರಿಹಾರವೆಷ್ಟು?. ನಿರುದ್ಯೋಗ ನಿರ್ಮೂಲನೆಗೆ ಸೃಷ್ಟಿಸಲಾಗಿರುವ ಉದ್ಯೋಗ, ಶೈಕ್ಷಣಿಕ ಅಭಿವೃದ್ಧಿಗೆ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸುವಂತೆ ಒತ್ತಾಯಿಸಿದ್ದಾರೆ.
ಕ್ಷೇತ್ರದಲ್ಲಿ ಬಡಜನರಿಗೆ ಉತ್ತಮ ದರ್ಜೆಯ ಆರೋಗ್ಯ ಸೇವೆ ಒದಗಿಸಲು ರೂಪಿಸಿರುವ ಯೋಜನೆಗಳು, ಕ್ಷೇತ್ರದಲ್ಲಿ ಎಷ್ಟು ಕಿ.ಮೀ. ರಸ್ತೆಗಳ ಅಭಿವೃದ್ಧಿಯಾಗಿದೆ, ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ, ಕೈಗೊಂಡ ಕಾಮಗಾರಿಗಳ ವಿವರವನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ವಿವೇಕ್, ಶಿವಕುಮಾರ್, ಪ್ರಸನ್ನಕುಮಾರ್, ಧರಣಿ, ಶಂಕರ್ ಇತರರಿದ್ದರು.