ಭದ್ರಾ ತೀರದಲ್ಲಿ ವಿಶೇಷ ಭದ್ರಾರತಿ

bhr 2 (11)
Published on

ಬಾಳೆಹೊನ್ನೂರು: ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯು ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಭದ್ರಾ ನದಿ ತಟದಲ್ಲಿ ಆಯೋಜಿಸಿದ್ದ ಭದ್ರಾರತಿ ಧಾರ್ಮಿಕ ಕಾರ್ಯಕ್ರಮ ವೈಭವದಿಂದ ನಡೆಯಿತು.

ದುರ್ಗಾ ಸಮಿತಿಯಿಂದ ಎರಡನೇ ಬಾರಿಗೆ ಭದ್ರಾ ನದಿಗೆ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಪೂಜೆ ಸಲ್ಲಿಸಿ ಕಳಶ ರೂಪದಲ್ಲಿ ಗಂಗೆಯನ್ನು ಪ್ರತಿಷ್ಠ್ಠಾಪಿಸಿ ಪೂಜಿಸಲಾಯಿತು. ನಂತರ ಕಾಶಿ, ಹರಿದ್ವಾರ, ಋಷಿಕೇಶದಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿ ತುಂಬಿ ಹರಿಯುವ ಭದ್ರಾ ನದಿಗೆ ಪಂಚ ಅರ್ಚಕರ ಸಮ್ಮುಖದಲ್ಲಿ ದೂಪಾರತಿ, ಏಕಾರತಿ ನೆರವೇರಿಸಿ ವಿಶೇಷವಾಗಿ ಅಲಂಕೃತವಾದ ಪಂಚಲೋಹದ ಆರತಿ ತಟ್ಟೆಯಲ್ಲಿ ಮೂರು ಬಾರಿ ಭದ್ರೆಗೆ ಆರತಿ ಬೆಳಗಲಾಯಿತು.

ನಂತರ ಶಂಖ, ಜಾಗಟೆ, ಡಮರುಗ, ಚಾಮರದ ಸೇವೆ ನೆರವೇರಿಸಲಾಯಿತು. ಬಳಿಕ ಅರ್ಚಕರಾದಿಯಾಗಿ ನೆರೆದಿದ್ದ ಸಾವಿರಾರು ಜನರು ಭದ್ರಾನದಿಯ ಒಡಲಿಗೆ ವಿವಿಧ ಪುಷ್ಪಗಳನ್ನು ಅರ್ಪಿಸಿ ಧನ್ಯತೆ ಪಡೆದರು. ಅರ್ಚಕರಾದ ಸುಬ್ರಹ್ಮಣ್ಯ ಭಟ್, ಪ್ರಶಾಂತ್ ಭಟ್, ಪ್ರಸನ್ನಭಟ್, ಅಭಿಷೇಕ್ ಭಟ್, ಶರತ್‌ಭಟ್ ಭದ್ರಾರತಿಯ ಧಾರ್ಮಿಕ ವಿಧಿ ವಿಧಾನಗಳು ನೆರವೇರಿಸಿದರು.

ಸಮಿತಿ ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ ಮಾತನಾಡಿ, ಪಟ್ಟಣದಲ್ಲಿ ನವರಾತ್ರಿ ಸಂದರ್ಭದಲ್ಲಿ ವಿಶೇಷವಾಗಿ ಭದ್ರಾರತಿ ನಡೆಸಲಾಗುವುದು. ದುರ್ಗಾ ಸಮಿತಿ ವಿಶೇಷ ಕಲ್ಪನೆಗಳೊಂದಿಗೆ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರ ಮನಗೆಲ್ಲುವ ಕಾರ್ಯ ಮಾಡುತ್ತಿದೆ ಎಂದರು.

ಮಂಜು ಹೊಳೆಬಾಗಿಲು ನೇತೃತ್ವದಲ್ಲಿ ಉಕ್ಕಡದ ಮೂಲಕ ತುಂಬಿ ಹರಿಯುವ ಭದ್ರಾ ನದಿಯಲ್ಲಿ ವಿವಿಧ ಮಾದರಿಯ ಪಟಾಕಿಗಳ ಪ್ರದರ್ಶನ ನೋಡುಗರ ಗಮನಸೆಳೆಯಿತು. ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಉಪಾಧ್ಯಕ್ಷ ಶಿವರಾಮಶೆಟ್ಟಿ, ಎಚ್.ಡಿ.ಸತೀಶ್, ಸಹ ಖಜಾಂಚಿ ಚೈತನ್ಯ ವೆಂಕಿ, ಕಾನೂನು ಸಲಹೆಗಾರ ಎಚ್.ಎಚ್.ಕೃಷ್ಣಮೂರ್ತಿ, ನಾರಾಯಣ ಶೆಟ್ಟಿ, ಸುಧಾಕರ್ ದಿಡಿಗೆಮನೆ, ನಾಗರಾಜ್ ಬರಗಲ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net