ಭಾರತ ರತ್ನ ಸರ್‍ ಎಂ ವಿಶ್ವೇಶ್ವರಯ್ಯ ಕುರಿತಾದ ವಿಶೇಷ ಲೇಖನ

Vishwesha
Published on

ಬೆಂಗಳೂರು: ಭಾರತ ರತ್ನ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಕುರಿತು ಯಾರಿಗೆ ಗೊತ್ತಿಲ್ಲ ಹೇಳಿ. ಸರ್.ಎಂ.ವಿ ಎಂಬ ಹೆಸರಿನಿಂದಲೇ ಜಗದ್ವಿಖ್ಯಾತರು. ಮಂಡ್ಯದ ಕನ್ನಂಬಾಡಿ ಸಮೀಪ ಕಾವೇರಿ ನದಿಗೆ ಅಡ್ಡಲಾಗಿ ಕೃಷ್ಣರಾಜ ಸಾಗರ ಜಲಾಶಯ ನಿರ್ಮಾಣ. ಮೂಸಿ ನದಿಗೆ ಅಣೆಕಟ್ಟು ನಿರ್ಮಿಸಿ ಹೈದರಾಬಾದ್‍ ಅನ್ನು ಪ್ರವಾಹಗಳಿಂದ ರಕ್ಷಿಸಿದ್ದು ಅವರ ಮೇರು ಸಾಧನೆ.

ಕರ್ನಾಟಕ ಮತ್ತು ಆಧ್ರಪ್ರದೇಶ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು ಭಾರತ ಕಂಡ ಶ‍್ರೇಷ್ಠ ಇಂಜಿನಿರುಗಳಲ್ಲಿ ಒಬ್ಬರು. ಅವರ ನೆನಪಿಗಾಗಿ ಅವರ ಜನ್ಮದಿನವಾದ ಸೆಪ್ಟೆಂಬರ್ 15ನ್ನು ಭಾರತದಲ್ಲಿ ಎಂಜಿನಿಯರುಗಳ ದಿನವಾಗಿ ಆಚರಿಸಲಾಗುತ್ತದೆ.

ಭಾರತ ರತ್ನ ಸರ್‍ ಎಂ ವಿಶ್ವೇಶ್ವರಯ್ಯನವರು ಕೆಆರ್‍ಎಸ್ ಅಣೆಕಟ್ಟು, ಮೂಸಿ ನದಿಗೆ ಅಣೆಕಟ್ಟು, ಮಧ್ಯ ಪ್ರದೇಶದ ಗ್ವಾಲಿಯಾರ್‍ನಲ್ಲಿ ಟಿಗ್ರಾ ಅಣೆಕಟ್ಟುಗಳು ನಿರ್ಮಿಸಿದ್ದೇ ಕಣ್ಮುಂದೆ ಬರುತ್ತವೆ. ಆದರೆ ಮೈಸೂರು ಸಂಸ್ಥಾನದ ದಿವಾನರಾಗಿ, ದಕ್ಷ ಆಡಳಿತಾಧಿಕಾರಿಯಾಗಿ ಅವರು ಮಾಡಿದ ಬಹಳಷ್ಟು ಸಾಧನೆಗಳು ಜನರಿಗೆ ತಿಳಿಯದೆ ಮರೆಯಲ್ಲಿ ಉಳಿದಿವೆ. ಅವುಗಳ ಮೇಲೆ ಬೆಳಕು ಚೆಲ್ಲುವುದೇ ಈ ಲೇಖನದ ಉದ್ದೇಶ.

ಸರ್ ಎಂ ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದ ಏಳನೇ ದಿವಾನರಾಗಿ 1912ನೇ ನವೆಂಬರ್ 10 ನೇ ತಾರೀಖಿನಂದು ಅಧಿಕಾರವಹಿಸಿಕೊಂಡರು. ಸುಮಾರು 6 ವರ್ಷಗಳಕಾಲ ಆಡಳಿತ ನಡೆಸಿ 09-12-1918 ರಲ್ಲಿ ದಿವಾನರ ಪದವಿಗೆ ರಾಜಿನಾಮೆ ನೀಡಿದರು. ವಿಶ್ವೇಶ್ವರಯ್ಯನವರನ್ನು ಪ್ರಪ್ರಥಮ ಭಾರತೀಯ ದಿವಾನರು ಎನ್ನಬಹುದು. ಏಕೆಂದರೆ ಹಿಂದಿನ ದಿವಾನರುಗಳಂತೆ ಸರ್.ಎಂ.ವಿ ಅವರು ಬ್ರಿಟಿಷ್ ಕಮಿಷನರುಗಳ ಆಶ್ರಯದಲ್ಲಿ ಬೆಳೆದು ಬಂದವರಾಗಿರಲಿಲ್ಲ ಅಥವಾ ಯಾರ ಶಿಫಾರಸ್ಸಿನ ಮೇಲೂ ದಿವಾನ್ ಪದವಿಗಳಿಸಿರಲಿಲ್ಲ. ಕೇವಲ ಸಿವಿಲ್ ಸರ್ವಿಸ್ ಅಧಿಕಾರಿಗಳನ್ನೇ ಸಂಸ್ಥಾನದ ದಿವಾನರನ್ನಾಗಿ ನೇಮಿಸಬೇಕಾದ ಹಿಂದಿನ ವಾಡಿಯನ್ನು ತೆಗೆದುಹಾಕಿ, ವಿಶ್ವೇಶ್ವರಯ್ಯನವರ ದಕ್ಷತೆ, ಅಪಾರ ಶ್ರಮ, ಶಕ್ತಿ, ಸಾಮಥ್ರ್ಯಗಳನ್ನು ಕಂಡು ಮಹಾರಾಜರಾದ ನಾಲ್ವಡಿ ಕೃಷ್ಣರಾಜಒಡೆಯರ್ ಅವರೇ ದಿವಾನ್ ಪದವಿಗೆ ನೇಮಿಸಿ, ತಾಯ್ನಾಡಿನ ಸೇವೆಗೆ ತಕ್ಕ ಅವಕಾಶವನ್ನು ಕಲ್ಪಿಸಿಕೊಟ್ಟರು.

ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ದಿವಾನರಾದ ನಂತರ ಅಧಿಕಾರಿಗಳು ಹಾಗೂ ಜನತೆಯಲ್ಲಿದ್ದ ಜಡತ್ವವನ್ನು ನಿರ್ಮೂಲನೆ ಮಾಡುವ ಕೆಲಸಕ್ಕೆ ಕೈಹಾಕಿ, ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡಿದರು.

ಸರ್ ಎಂ ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗ ಮಾಡಿದ ಕೆಲವು ಪ್ರಮುಖ ಸಾಧನೆಗಳೆಂದರೆ,

1. ಮೈಸೂರು ರಾಜ್ಯದಲ್ಲಿದ್ದ ಎಲ್ಲಾ ಕಾಲೇಜುಗಳು ಮದ್ರಾಸ್ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟಿದ್ದ ಸಂದರ್ಭದಲ್ಲಿ ಸತತ ಪರಿಶ್ರಮದಿಂದ 1917ರ ಜುಲೈ 17ರಂದು ಲೆಜಿಸ್ಲೇಟಿವ್ ಕೌನ್ಸಿಲ್‍ನಲ್ಲಿ ಯೂನಿವರ್ಸಿಟಿ ಬಿಲ್ ಮಂಡಿಸಿ, ಅಂಗೀಕಾರ ಪಡೆದು ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು.

2. ಕನ್ನಡದ ಅಭಿವೃದ್ದಿಗೆ ಶ್ರಮಿಸಲು ಹಲವು ಗಣ್ಯರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾದಾಗ ವಿಶ್ವೇಶ್ವರಯ್ಯನವರು ವೈಯಕ್ತಿಕವಾಗಿ ಹಾಗೂ ಸರ್ಕಾರದ ಪರವಾಗಿ ಸಂಪೂರ್ಣ ಬೆಂಬಲ ನೀಡಿ ಕನ್ನಡ ನಾಡು ನುಡಿ ಬೆಳವಣಿಗೆಗೆ ನಾಂದಿಯಾಡಿದರು.

3. ಮೈಸೂರು ಸಿವಿಲ್ ಸರ್ವಿಸ್ ಪರೀಕ್ಷೆಗಳಿಗೆ ಮೈಸೂರಿನವರಿಗೆ ಮಾತ್ರ ಪ್ರವೇಶ ದೊರಕಿತು.

4. 1913 ರಲ್ಲಿ ಮೈಸೂರು ಬ್ಯಾಂಕನ್ನು ಸ್ಥಾಪನೆ ಮಾಡಿದರು.

5. ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಸ್ಕೂಲ್ ಹಾಗೂ ಮೈಸೂರಿನಲ್ಲಿ ಚಾಮರಾಜೇಂದ್ರ ಟೆಕ್ನಿಕಲ್ ಇನ್‍ಸ್ಟಿಟ್ಯೂಟ್ ಆರಂಭವಾಯಿತು.

6. 1913 ರಲ್ಲಿ ಕಡ್ಡಾಯ ಶಿಕ್ಷಣ ಜಾರಿಗೆ ಬಂದಿತು. ಒಂದು ಸಾವಿರ ಪ್ರಾಥಮಿಕ ಪಾಠಶಾಲೆಗಳನ್ನು ತೆರೆಯಲಾಯಿತು.

7. ಹೆಣ್ಣು ಮಕ್ಕಳ ವಿಧ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯಿತು.

8. ಮೈಸೂರು-ಹಾಸನ-ಅರಸೀಕೆರೆ ರೈಲು ಮಾರ್ಗ ಕಾಮಗಾರಿ ಆರಂಭ ಹಾಗೂ ಮುಕ್ತಾಯ

9. ಗ್ರಾಮಾಭಿವೃದ್ಧಿ ಸಮಿತಿಗಳ ರಚನೆ, ಗ್ರಾಮಾಂತರ ರಸ್ತೆಗಳ ನಿರ್ಮಾಣ, ಶಿಕ್ಷಣ ಹಾಗೂ ಪರಸ್ಪರ ಸಹಯಾಕ ಸಂಘಗಳ ಸ್ಥಾಪನೆ, ಸಂಪಾದನೆ ಹೆಚ್ಚಿಸಲು ಸಾಧನೋಪಾಯಗಳು ಹೀಗೆ ಮುಂತಾದ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದರು.

ಕರ್ನಾಟಕಕ್ಕೆ ಅಂದರೆ ಅಂದಿನ ಮೈಸೂರು ಸಂಸ್ಥಾನಕ್ಕೆ ಹಾಗೂ ಬೆಂಗಳೂರಿಗೆ ಸರ್ ಎಂ ವಿಶ್ವೇಶ್ವರಯ್ಯ ನೀಡಿದ ಕೊಡುಗೆಗಳಿಂದಲೇ ಇಂದು ಕರ್ನಾಟಕ ಹಲವು ಕ್ಷೇತ್ರಗಳಲ್ಲಿ ಸುಪ್ರಸಿದ್ಧಿಯಾಗಿದೆ ಎಂದರೆ ಅತಿಶಯೋಕ್ಷಿಯಲ್ಲ ಎಂಬುದು ನನ್ನ ಅಭಿಪ್ರಾಯ.

| ರಾಘವೇಂದ್ರ ಪೂಜಾರಿ ಹೆಚ್. ಎಸ್ (ಸಂಯೋಜಕರು, ಬಿ.ಪ್ಯಾಕ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net