

ಚಿಕ್ಕಬಳ್ಳಾಪುರ: ವಸ್ತುವನ್ನು ಖರೀದಿಸುವಾಗ ಗುಣಮಟ್ಟದ ಸೂಚಕ ಐಎಸ್‌ಐ ಗುರುತು ಖಾತ್ರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸಲಹೆ ನೀಡಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ರಾಷ್ಟ್ರೀಯ ಗುಣಮಟ್ಟ ಸಂಸ್ಥೆ, ಗ್ರಾಹಕರ ವ್ಯವಹಾರಗಳ ಹಾಗೂ ಸಾರ್ವಜನಿಕ ವಿತರಣಾ ಪದ್ದತಿ ಸಚಿವಾಲಯ, ಜಿಲ್ಲಾಡಳಿತವು ಕೈಗೊಂಡಿದ್ದ ತರಬೇತಿ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದರು.
ಮಹಿಳೆಯರು ಹೆಚ್ಚು ಇಷ್ಟಪಡುವ ವಸ್ತುಗಳ ಪಟ್ಟಿಯಲ್ಲಿ ಸಾಮಾನ್ಯವಾಗಿ ಆಭರಣಗಳು ಮೊದಲನೇ ಆದ್ಯತೆಯಾಗಿದೆ. ಬಡವ, ಮಧ್ಯಮ ಸೇರಿದಂತೆ ಎಲ್ಲ ವರ್ಗದವರು ಬಂಗಾರ ಖರೀದಿಸುತ್ತಾರೆ. ಶುಭ ಸಮಾರಂಭಗಳ ವೇಳೆ ಚಿನ್ನ ಅನಿವಾರ್ಯ ಎನ್ನುವಂತಾಗಿದೆ ಎಂದು ತಿಳಿಸಿದ್ದಾರೆ. .
ಚಿನ್ನದ ಗುಣಮುಟ್ಟದ ಬಗ್ಗೆ ಸರಿಯಾಗಿ ಪರಿಶೀಲಿಸುವ ವಿಧಾನಗಳ ಬಗ್ಗೆ ಖರೀದಿದಾರರು ಸಮರ್ಪಕವಾಗಿ ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಬಿಐಎಸ್ ಹಾಲ್‌ಮಾರ್ಕ್ ಬಂದ ಬಳಿಕ ವಹಿವಾಟಿನ ವಿಶ್ವಾಸ ಹೆಚ್ಚಾಗಿದೆ. ಚಿನ್ನ ಅಸಲಿ ಇಲ್ಲವೇ ನಕಲಿ ಎನ್ನುವುದನ್ನು ವಿಶೇಷ ಸೂಚಕದಿಂದ ಗುರುತಿಸಬಹುದಾಗಿದೆ. ಇದರ ನಡುವೆಯೂ ಇದರಲ್ಲೂ ವಂಚನೆಗಳಾಗುತ್ತಿವೆ. ಇದಕ್ಕೆ ಸಮರ್ಪಕವಾಗಿ ವೈಜ್ಞಾನಿಕ ರೀತಿಯಲ್ಲಿ ಪರಿಶೀಲಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಕೇಂದ್ರ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ನ ಫಾರ್ಮರ್ ಡೈರೆಕ್ಟರ್ ಎಸ್. ಡಿ. ಸೆಲ್ವನ್ ಮಾತನಾಡಿ, ಗ್ರಾಹಕ ಬಳಕೆಯ ವಸ್ತುಗಳಿಗೆ ಐಎಸ್‌ಐ, ಖಾದ್ಯ ವಸ್ತುಗಳಿಗೆ ಅಗ್ ಮಾರ್ಕ್ ಇರುವ ಮಾದರಿಯಲ್ಲಿ ಚಿನ್ನಾಭರಣಗಳ ಶುದ್ಧತೆಗೆ ಸೂಚಕ ಹಾಲ್‌ಮಾರ್ಕ್. ಇದೊಂದು ಆಭರಣದಲ್ಲಿ ಬಳಸಲಾಗಿರುವ ಚಿನ್ನದ ಶುದ್ದತೆಗೆ ಅಧಿಕೃತ ಪ್ರಮಾಣ ಪತ್ರ ನೀಡಲಿದೆ ಎಂದು ತಿಳಿಸಿದ್ದಾರೆ.
*ವಿಶೇಷ ಆ್ಯಪ್
ಇತ್ತೀಚಿನ ದಿನಗಳಲ್ಲಿ ನಕಲಿ ಚಿನ್ನವನ್ನು ಪರಿಶೀಲಿಸುವುದಕ್ಕೆ ಕೇಂದ್ರ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ಸಂಸ್ಥೆಯು “ಬಿಎಸ್‌ಐ ಕೇರ್ ಆ್ಯಪ್” ಪರಿಚಯಿಸಿದೆ. ಇದರಿಂದ ಚಿನ್ನದ ಹಾಲ್ ಮಾರ್ಕ್ ಅಸಲಿತನವನ್ನು ಸುಲಭವಾಗಿ ಪತ್ತೆ ಮಾಡಬಹುದು. ಚಿನ್ನದ ಗುಣಮಟ್ಟವನ್ನ ಖಾತ್ರಿ ಮಾಡಿಕೊಳ್ಳಬಹುದಾಗಿದೆ.