

ಹುಬ್ಬಳ್ಳಿ : ಇಲ್ಲಿನ ಗೋಕುಲ ರಸ್ತೆಯ ಮಹಾವೀರ ತ್ರಿಕೂಟ ಜಿನಮಂದಿರದ ಪಂಚಕಲ್ಯಾಣ ಮಹೋತ್ಸವದ ಎರಡನೇ ದಿನವಾದ ಸೋಮವಾರಂದು ಮಾನಸಗಿರಿ ಮಂದಿರದಲ್ಲಿ ಮಂಗಳವಾದ್ಯ, ಮಂಗಳಾಸ್ಟಕದೊಂದಿಗೆ ತೀರ್ಥಟಕರರಿಗೆ ವಿಶೇಷ ಅಭಿಷೇಕ, ಶಾಂತಿಧಾರ ಅತ್ಯಂತ ಭಕ್ತಿ ಭಾವದಿಂದ ಜರುಗಿದವು.
ಸೌಧರ್ಮ ಇಂದ್ರ ಇಂದ್ರಾಣಿ ಸಹಿತ ಅಷ್ಟ ಕನ್ನಿಕೆಯರು, ರಾಜಕುಮಾರಿಯರು, ಮಂಗಳ ಕುಂಭದೊಂದಿಗೆ ಭವ್ಯ ಮೆರವಣಿಗೆ ಮೂಲಕ ಮಂದಿರದಿಂದ ಪಂಚಕಲ್ಯಾಣ ಮುಖ್ಯವೇದಿಕೆಗೆ ಆಗಮಿಸಿ, ಭಗವಂತರಿಗೆ ಅಭಿಷೇಕ ಮಾಡುವ ದೃಶ್ಯ ನಯನ ಮನೋಹರವಾಗಿತ್ತು.
ನಂತರ ಮದ್ಯಾಹ್ನ ಆಚಾರ್ಯ ಶ್ರೀ ಪುಣ್ಯಸಾಗರ ಮುನಿಮಹಾರಾಜರು, ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಹಾಗೂ ಪೂಜ್ಯ ಮಾತಾಜಿ ಅವರ ಸಾನ್ನಿಧ್ಯದಲ್ಲಿ ಜನ್ಮ ಕಲ್ಯಾಣಕ ವಿಧಿ ಅತ್ಯಂತ ಅರ್ಥಪೂರ್ಣವಾಗಿ ಜರುಗಿತು.
ಪೂಜಾ ಸಮಾರಂಭ ನಡೆದ ವೇದಿಕೆಗೆ ಶಾಸಕ ಮಹೇಶ ಟೆಂಗಿನಕಾಯಿ ಆಗಮಿಸಿ, ತೀರ್ಥಂಕರರ ಆಶೀರ್ವಾದ ಪಡೆದರು.
ನಂತರ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಜೈನ ಸಮುದಾಯ ಶಾಂತಿಪ್ರಿಯರು. ಈ ಸಮಾಜದವರ ಪೂಜಾ ವಿಧಾನಗಳು ಜಗತ್ತಿಗೆ ಮಾದರಿ. ಭಗವಾನ ಮಹಾವೀರರ ಸಂದೇಶ ಪಾಲನೆ ಇಂದಿನ ದಿನಗಳಲ್ಲಿ ಅಗತ್ಯವಾಗಿದೆ ಎಂದು ಹೇಳಿದರು.
ಸಂಜೆ ಪಾಂಡುಕಶಿಲೆಯಲ್ಲಿ ಜಿನಬಾಲಕನಿಗೆ ಜನ್ಮಾಭಿಷೇಕಪೂಜೆ ಮತ್ತು 108 ಕಳಸಗಳಿಂದ ಅಭಿಷೇಕ ನಡೆಯಿತು. ನಂತರ ತೊಟ್ಟಿಲೋತ್ಸವ, ನಾಮಕರಣ, ಬಾಲಕ್ರೀಡೆ ಮತ್ತಿತರ ಕಾರ್ಯಕ್ರಮಗಳನ್ನು ಶ್ರಾವಕರು ಕಣ್ತುಂಬಿಕೊಂಡರು.
ಉದಯ ಧಡೂತಿ, ಧರಣೇಂದ್ರ ಜವಳಿ, ಮಹಾವೀರ ಗೋಗಿ, ಶಾಂತರಾಜ ಹದಗಳಗಿ, ಎಸ್.ಬಿ. ನವಲಗುಂದ, ಪ್ರದ್ಮಶ್ರೀ ಹದಗಳಗಿ, ಶಾಂತಪ್ಪ ಮಲ್ಲಸಮುದ್ರ ಹಾಗೂ ಇತರರು ಇದ್ದರು.
ಮೇ 13ರಂದು ದೀಕ್ಷಾ ಕಲ್ಯಾಣ ವಿಧಾನ, ಋಷಿಮಂಡಲ ಆರಾಧನೆ, ರಾಜ್ಯಾಭಿಷೇಕ ಮತ್ತಿತರರ ಕಾರ್ಯಕ್ರಮಗಳು ಜರುಗಲಿವೆ.