

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಕಾಮನಕಟ್ಟಿಯಲ್ಲಿನ ಐತಿಹಾಸಿಕ ಹಿನ್ನಲೆಯುಳ್ಳ ಅನುಗ್ರಹ ಆಂಜನೇಯ ದೇವಸ್ಥಾನದಲ್ಲಿ ಶ್ರಾವಣ ಮಾಸ ನಿಮಿತ್ತ ಸೆ. 1ರಂದು ಬೆಳಗ್ಗೆ 7 ಗಂಟೆಯಿಂದ 25 ಪವಿತ್ರ ನದಿಗಳ ನೀರಿನಿಂದ ವಿಶೇಷ ಅಭಿಷೇಕ ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಮಂಡಳಿ ಸದಸ್ಯ ಶ್ರೀಧರ ದಾನಪ್ಪಗೌಡರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತಿಕ ಕಲ್ಯಾಣ ಹಾಗೂ ಸಮೃದ್ಧ ಕರ್ನಾಟಕದ ಸಂಕಲ್ಪಕ್ಕೆ ಹನುಮನ ಭಕ್ತರು ಸೇರಿ ರಾಮಶಿಲೆಯಲ್ಲಿರುವ ಹನುಮಂತ ದೇವರಿಗೆ ಈ ವಿಶೇಷ ಅಭಿಷೇಕ ಮಾಡಲು ತೀರ್ಮಾನಿಸಿದ್ದೇವೆ. ಗಂಗಾ, ಯಮುನಾ, ಸರಸ್ವತಿ, ಸಿಂಧೂ, ಮಂದಾಕಿನಿ, ಸೌಪರ್ಣಿಕಾ, ದೂದಗಂಗಾ, ವೇದ ಗಂಗಾ, ಕೃಷ್ಣೆ, ಚಂದ್ರಭಾಗ, ಕಾವೇರಿ, ನೇತ್ರಾವತಿ, ಪಂಚವಟಿ, ತುಂಗಾ-ಭದ್ರಾ, ನೇಪಾಳದ ಗಂಡಕಿ ನದಿ ಸೇರಿ 25 ಪವಿತ್ರ ನದಿಗಳ ನೀರನ್ನು ಭಕ್ತರೇ ತಂದಿದ್ದು, ಅಂದು ದೇವರಿಗೆ ಅಪಿರ್ಸಲಾಗುವುದು ಎಂದರು.
ಭಕ್ತರಿಂದಲೇ ಅಭಿಷೇಕ ನಡೆಯಲಿದ್ದು, ತದನಂತರ ಅಭಿಷೇಕ ಪವಿತ್ರ ತೀರ್ಥವನ್ನು ಭಕ್ತರಿಗೂ ವಿತರಿಸಲಾಗುವುದು. ಬಳಿಕ ಅನ್ನಪ್ರಸಾದ ಸಹ ನಡೆಯಲಿದೆ ಎಂದರು.
ಬಸವರಾಜ ಹೂಗಾರ, ಬಸವರಾಜ ಬಾಗೋಡಿ, ಶಂಕರ ಯಲಿಗಾರ, ಸಂತೋಷ ಪಾಟೀಲ, ಇತರರು ಇದ್ದರು.