ಮತ್ತೆ ಮತ್ತೆ ಅದನ್ನು ಮಾತಾಡೋದ್ರಲ್ಲಿ ಅರ್ಥವಿಲ್ಲ: ಬಿಎಸ್​ವೈ ಪುತ್ರ ಹೀಗಂದಿದ್ದೇಕೆ?

Vijayendra B Y
Published on

ಹಾಸನ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮತ್ತೆ ಮತ್ತೆ ಅದನ್ನು ಮಾತಾಡೋದ್ರಲ್ಲಿ ಅರ್ಥವಿಲ್ಲ ಎಂದು ಹೇಳುವ ಮೂಲಕ ಒಂದು ನಿಗದಿತ ವಿಚಾರಕ್ಕೆ ಸಂಬಂಧಿಸಿದಂತೆ ಇತಿಶ್ರೀ ಹೇಳಲು ಬಯಸಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ವಿಧಾನಪರಿಷತ್​ಗೆ ವಿಜಯೇಂದ್ರಗೆ ಟಿಕೆಟ್​ ಸಿಗುವುದು ಬಹುತೇಕ ಖಚಿತ ಎಂದು ಎಲ್ಲೆಡೆ ಹೇಳಲಾಗಿದ್ದರೂ ಕೊನೆಯ ಕ್ಷಣದಲ್ಲಿ ಟಿಕೆಟ್ ಅವರ ಕೈತಪ್ಪಿದೆ. ಇದೇ ವಿಚಾರವಾಗಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು ಒಂದಷ್ಟು ಸ್ಪಷ್ಟನೆಯನ್ನು ನೀಡಿದರು.

ವಿಧಾನ ಪರಿಷತ್ ಟಿಕೆಟ್ ಕೈತಪ್ಪಿರುವ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಆದರೆ ಮತ್ತೆ ಮತ್ತೆ ಅದೇ ವಿಷಯ ಮಾತನಾಡುವುದರಲ್ಲಿ ಅರ್ಥವಿಲ್ಲ. ಟಿಕೆಟ್ ಕೈತಪ್ಪಿರುವ ಬಗ್ಗೆ ನನಗೆ ಯಾವುದೇ ಬೇಸರವೂ ಇಲ್ಲ. ಇಪ್ಪತ್ತು ಹೆಸರುಗಳಲ್ಲಿ ನಾಲ್ಕು ಹೆಸರನ್ನು ಕೇಂದ್ರ ನಾಯಕರು ಚರ್ಚೆ ಮಾಡಿ ತೀರ್ಮಾನ ಮಾಡಿದ್ದಾರೆ. ಯಾರಿಗೂ ಇದರಿಂದ ಅನ್ಯಾಯ ಆಗಿಲ್ಲ ಎಂದು ಅವರು ವಿವರಣೆಯನ್ನು ನೀಡಿದರು.

ಇನ್ನು ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಬರುವಂಥ ದಿನಗಳಲ್ಲಿ ಯಾರು ದುಡಿದಿದ್ದಾರೆ ಅವರಿಗೆ ಅವಕಾಶ ಸಿಗುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ನಾನು ಸಿದ್ಧನಿದ್ದೇನೆ. ರಾಜ್ಯ ನಾಯಕರು ಕೇಂದ್ರ ನಾಯಕರು ಏನು ಆದೇಶ ಮಾಡುತ್ತಾರೋ ಅದನ್ನು ಪಾಲಿಸುತ್ತೇವೆ. ನನಗೆ ಟಿಕೆಟ್ ಕೊಟ್ಟರೆ ಸಿದ್ಧವಿದ್ದೇನೆ, ಕೊಡದೆ ಇದ್ದರೆ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ವಿಜಯೇಂದ್ರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net