

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡಿದರೆ ಶಾಸಕರಿಗೆ ವಿಶೇಷ ಸ್ಥಾನಮಾನ ಎಂಬುದು ಖಾತ್ರಿ ಆಗಿದೆ. ಬಿ.ಆರ್. ಪಾಟೀಲ, ಬಸವರಾಜ ರಾಯರೆಡ್ಡಿ ಮತ್ತು ಆರ್.ವಿ. ದೇಶಪಾಂಡೆ ಅವರಿಗೆ ವಿಶೇಷ ಸ್ಥಾನಮಾನ ಸಿಕ್ಕಿರುವುದು ನೋಡಿದರೆ, ಇನ್ಮುಂದೆ ಸಿಎಂಗೆ ಬೈದರೆ ಒಂದು ಸ್ಥಾನ ಖಾತ್ರಿ ಎಂಬುದು ಸಾಬೀತಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೆ ಯಾರು ಏನು ಮಾತನಾಡುತ್ತಾರೋ ಅವರಿಗೆ ಏನೇನು ಸ್ಥಾನಮಾನ ಸಿಗಲಿದೆಯೋ ನೋಡಬೇಕು ಎಂದರು.
ಬಿಜೆಪಿ ವಿರುದ್ಧ ಬಹಿರಂಗ ಹೇಳಿಕೆ ಕೊಡುವುದನ್ನು ಯಾರೇ ಆಗಲಿ ಕೂಡಲೇ ನಿಲ್ಲಿಸಬೇಕು. ನಾನು ಬಿಜೆಪಿ ಕೋರ್ ಕಮಿಟಿಯಲ್ಲಿರಲಿಲ್ಲ ಎಂದು ಜೋಶಿ ತಿಳಿಸಿದರು.
ಅಭಿನಂದನೆ: ರಾಮ ಮಂದಿರ ಉದ್ಘಾಟನೆ, ಅಯೋಧ್ಯೆ ಅಭಿವೃದ್ಧಿ ವಿಚಾರ ಹೆಮ್ಮೆಯ ವಿಷಯ. ಸನಾತನ ಧರ್ಮದ ಅಭಿಮಾನಿಗಳು, ರಾಮನ ಭಕ್ತರು ಸತತ ಹೋರಾಟ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಕಾಲದಲ್ಲಿ ಮಂದಿರ ನಿರ್ಮಾಣದ ಯಶಸ್ಸು ಲಭಿಸಿದೆ. ಅಯೋಧ್ಯೆ ದೊಡ್ಡ ಪ್ರಮಾಣದ ಸಾಂಸ್ಕೃತಿಕ, ಧಾರ್ಮಿಕ ಪ್ರವಾಸಿ ಕೇಂದ್ರವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬಂದರೂ ಕಷ್ಟ, ಬರದಿದ್ದರೂ ಕಷ್ಟ: ರಾಮಮಂದಿರ ವಿಚಾರವಾಗಿ ನಾವು ರಾಜಕೀಯ ಮಾಡುತ್ತಿಲ್ಲ. ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಕಾಂಗ್ರೆಸ್ ಪಕ್ಷವು ರಾಮ ಮಂದಿರದ ವಿರುದ್ಧ ಹೋರಾಟ ಮಾಡಿತು. ಸಂಪೂರ್ಣ ವಾದ ಆಲಿಸಿ ಸುಪ್ರೀಂ ಕೋರ್ಟ್ ನಿರ್ಣಯ ಕೊಟ್ಟಿದೆ. ಕಾಂಗ್ರೆಸ್‌ನವರು ಹೊಟ್ಟೆ ಕಿಚ್ಚಿನಿಂದ ಮಾತಾನಾಡುತ್ತಿದ್ದಾರೆ. ನಾವು ಸೋನಿಯಾ ಗಾಂಧಿಗೂ, ಮಲ್ಲಿಕಾರ್ಜುನ ಖರ್ಗೆ ಅವರಿಗೂ ಅಹ್ವಾನ ಕೊಟ್ಟಿದ್ದೇವೆ. ನೀವು ಬಂದರೆ ರಾಜಕಾರಣ ಆಗುವುದಿಲ್ಲ. ಬರೇ ಹೋದರೆ ಜನರು ಬೈಯುತ್ತಾರೆ. ಅವರು ಬಂದರೂ ಕಷ್ಟ, ಬರದೇ ಇದ್ದರೆ ಕಷ್ಟ. ಅದನ್ನೇ ರಾಜಕಾರಣ ಅಂದರೆ ನಾವೇನು ಮಾಡೋಣ ? ಎಂದು ಪ್ರಶ್ನೆ ಮಾಡಿದರು.
ರಾಮನ ಅಸ್ತಿತ್ವ ಕುರಿತು ಕಾಂಗ್ರೆಸ್‌ನವರು ಪ್ರಶ್ನೆ ಮಾಡಿದರು. ಅವರು ಉದ್ಘಾಟನೆಗೆ ಬಂದರೆ ಅಲ್ಪಸಂಖ್ಯಾತರ ಮತ ಹೋಗುತ್ತವೆ ಎನ್ನುವ ಭೀತಿ, ಬರದೇ ಹೋದರೆ ಹಿಂದುಗಳ ಮತಗಳು ಹೋಗುತ್ತವೆ ಎನ್ನುವ ಭಯವಿದೆ. ಕಾಂಗ್ರೆಸ್‌ನವರು ಮೊದಲು ತಮ್ಮ ತಲೆ ಸರಿ ಮಾಡಿಕೊಳ್ಳಬೇಕು ಎಂದು ಕುಟುಕಿದರು.