

ವಿಜಯವಾಣಿ ಸುದ್ದಿಜಾಲ ಮಂಗಳೂರು
ಸಮರ್ಪಕ ನಿರ್ವಹಣೆ ಕೊರತೆಯಿಂದ ಸಂಭವಿಸುವ ವಿದ್ಯುತ್ ಅಪಘಾತ ಹಾಗೂ ಸಾವು-ನೋವುಗಳಿಗೆ ಸಂಬಂಧಪಟ್ಟ ಮೆಸ್ಕಾಂ ಅಧಿಕಾರಿಗಳೇ ಹೊಣೆಗಾರರು. ಅನಾಹುತ ಸಂದರ್ಭ ಸಂಬಂಧಪಟ್ಟ ಎಕ್ಸಿಕ್ಯೂಟಿವ್ ಇಂಜಿನಿಯರ್‌ಗಳು ಜವಾಬ್ದಾರರು ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಎಚ್ಚರಿಸಿದರು.
ವಿದ್ಯುತ್ ಅಪಘಾತಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮಂಗಳೂರು ಮೆಸ್ಕಾಂ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಮಳೆಗಾಲದಲ್ಲಿ ಸಂಭವನೀಯ ಸಾವು-ನೋವು ತಪ್ಪಿಸಲು ಡೇಂಜರ್ ಸ್ಪಾಟ್‌ಗಳನ್ನು ಮೊದಲೇ ಗುರುತಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕು. ಸುರಕ್ಷತೆ ಕ್ರಮ ಕೈಗೊಳ್ಳುವ ವಿಚಾರದಲ್ಲಿ ನಿರ್ಲಕ್ಷೃ ಸಲ್ಲದು ಎಂದರು.
ಮೆಸ್ಕಾಂ, ಲೋಕೋಪಯೋಗಿ ಮತ್ತು ಅರಣ್ಯ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು. ತಂತಿ ಮೇಲೆ ಮರ ಉರುಳುವ, ಮರದ ಗೆಲ್ಲುಗಳು ಬೀಳುವ ಸಂಭವ, ವಿದ್ಯುತ್ ಕಂಬ ಉರುಳುವ ಸಾಧ್ಯತೆ ಮುಂತಾದ ಸಂಭವನೀಯ ಅಪಾಯಗಳನ್ನು ಗುರುತಿಸಿ, ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು.
ವಿದ್ಯುತ್ ತಂತಿ ಪಕ್ಕದ ಮರ ಮತ್ತು ಗೆಲ್ಲುಗಳ ತೆರವು ವಿಳಂಬ ಯಾಕೆ ಎಂದು ಪ್ರಶ್ನಿಸಿದ ಅವರು, ಇಂತಹ ವಿಚಾರಗಳಲ್ಲಿ ನಿರ್ಲಕ್ಷೃದಿಂದ ಅನಾಹುತ ಸಂಭವಿಸುತ್ತವೆ. ಯಾರದೋ ತಪ್ಪಿಗೆ ಅಮಾಯಕರು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಇಂತಹ ಕೆಲಸಗಳನ್ನು ಆದ್ಯತೆಯಲ್ಲಿ ನಿರ್ವಹಿಸುವಂತೆ ತಾಕೀತು ಮಾಡಿದರು.
ಮಂಗಳೂರಿನಲ್ಲಿ ಆಟೋ ಚಾಲಕರಿಬ್ಬರ ಸಾವು ಪ್ರಕರಣದ ಕುರಿತು ಸ್ಪಷ್ಟನೆ ನೀಡಿದ ಮೆಸ್ಕಾಂ ಅಧಿಕಾರಿ, ಘಟನೆ ನಡೆದ ಪಾಂಡೇಶ್ವರ ಪ್ರದೇಶದಲ್ಲಿ ಸಂಪೂರ್ಣ ಅಂಡರ್ ಗ್ರೌಂಡ್ ಕೇಬಲ್ ಕಾಮಗಾರಿ ನಡೆದಿದೆ. ಆದರೆ ಘಟನೆ ನಡೆದ ರಸ್ತೆಯಲ್ಲಿ ಬೀದಿ ದೀಪಗಳು ಇರಬೇಕು ಎಂದು ಮಹಾನಗರ ಪಾಲಿಕೆಯವರು ತಿಳಿಸಿದ್ದರಿಂದ ಆ ಎಚ್‌ಟಿ ತಂತಿಯನ್ನು ಹಾಗೇ ಉಳಿಸಲಾಗಿತ್ತು. ಇದೇ ತಂತಿಯ ಮೇಲೆ ಮರ ಬಿದ್ದು ಅನಾಹುತ ಸಂಭವಿಸಿದೆ ಎಂದು ಹೇಳಿದರು.
ಮಳೆಗಾಲ ಸಂದರ್ಭ ಸಮುದ್ರ ಬದಿ ನದಿ ರಾಜ ಕಾಲುವೆ ಚರಂಡಿ ಬಳಿ ವಿದ್ಯುತ್ ಅಪಘಾತ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು. ಬೀಳುವ ಹಂತದಲ್ಲಿರುವ ವಿದ್ಯುತ್ ಕಂಬ, ಮರಗಳನ್ನು ತಕ್ಷಣ ತೆರವು ಮಾಡಿ. ಅಂತಹ ಸ್ಪಾಟ್ ಕಂಡುಬಂದರೆ ಜನರಿಗೆ ಮಾಹಿತಿ ನೀಡಲು ವೇದಿಕೆ ಕಲ್ಪಿಸಬೇಕು. ಪ್ರಾಣಹಾನಿ ತಡೆಯುವ ಉದ್ದೇಶದಿಂದ ಕಡಿದು ಬೀಳುವ ತಂತಿಯಲ್ಲಿ ವಿದ್ಯುತ್ ಪ್ರವಹಿಸುವುದನ್ನು ತಡೆಯಲು ಸೂಕ್ತ ತಂತ್ರಜ್ಞಾನ ಬಳಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಅರಣ್ಯ ಇಲಾಖೆಯ ಮಂಗಳೂರು ವಿಭಾಗದ ಉಪ ಸಂಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಉಪಸ್ಥಿತರಿದ್ದರು.