

ಕೋಲಾರ: ಕರ್ನಾಟಕ ರಾಜ್ಯ ಉದಯವಾಗಿ 50 ವರ್ಷ ಪೂರೈಸಿದ ಸಂಭ್ರಮದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆ ಶನಿವಾರ ಕೋಲಾರ ನಗರ ಪ್ರವೇಶಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಸ್ವಾಗತ ಬಳಿಕ ನಗರದ ಮುಖ್ಯ ರಸ್ತೆಗಳಲ್ಲಿ ರಥದ ಮೆರವಣಿಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಅಕ್ರಂ ಪಾಷಾ, ಪ್ರತಿ ತಾಲೂಕಿನಲ್ಲೂ ಒಂದೊಂದು ದಿನ ರಥಯಾತ್ರೆ ಸಂಚಾರ ನಡೆಸಿ, ಮುಂದಿನ ತಾಲೂಕಿಗೆ ಸಾಗಲಿದೆ. ಈ ವರ್ಷದ ಕನ್ನಡ ರಾಜ್ಯೋತ್ಸವ ದಿನಕ್ಕೆ ಕರ್ನಾಟಕ ರಾಜ್ಯ ಉದಯವಾಗಿ 50 ವರ್ಷ ಪೂರ್ಣಗೊಳ್ಳುವುದರಿಂದ ಕನ್ನಡ ನಾಡು ನುಡಿಯ ಬಗ್ಗೆ ಇಂದಿನ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರ ರಥಯಾತ್ರೆಯನ್ನು ಹಮ್ಮಿಕೊಂಡಿದೆ. ಪ್ರತಿಯೊಬ್ಬೂ ಭಾಷಾಭಿಮಾನ ಬೆಳೆಸಿಕೊಂಡು ನಾಡು, ನುಡಿ ಏಳ್ಗೆಯ ಪಥದಲ್ಲಿ ಸಾಗಲು ಶ್ರಮಿಸಬೇಕು ಎಂದರು.
ಕನ್ನಡ ಭಾಷೆ ಉಳಿವಿಗಾಗಿ ಶ್ರಮಪಟ್ಟ ಸಾಹಿತಿಗಳು ಮತ್ತು ಹೋರಾಟಗಾರರನ್ನು ಸದಾ ಸ್ಮರಿಸಬೇಕು. ಈ ಸಂದೇಶ ಎಲ್ಲ ಕನ್ನಡ ಪ್ರೇಮಿಗಳಿಗೂ ತಲುಪಿಸಬೇಕು. ಆ ನಿಟ್ಟಿನಲ್ಲಿ ರಥಯಾತ್ರೆಯನ್ನು ಎಲ್ಲರೂ ಅದ್ದೂರಿಯಾಗಿ ಸ್ವಾಗತಿಸಿ ಗೌರವ ಸಮರ್ಪಣೆ ಮಾಡಬೇಕು. ಕನ್ನಡ ನಾಡು ನುಡಿಯ ಮಹತ್ವವನ್ನು ಎಲ್ಲರಿಗೂ ತಿಳಿಸಿಕೊಡಬೇಕು
ಎಂದು ಡಿಸಿ ಮನವಿ ಮಾಡಿದರು.
ತಹಸೀಲ್ದಾರ್ ಬಿ.ನಯನಾ ಮಾತನಾಡಿ, ಕನ್ನಡ ಭಾಷೆಯ ಉಳಿವಿಗಾಗಿ ಒಗ್ಗಟ್ಟಿನಿಂದ ಹೋರಾಡಲು ಹೆಚ್ಚು ಆದ್ಯತೆ ನೀಡಬೇಕು. ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗೆ ಕಾಣಿಕೆಯನ್ನಾಗಿ ನೀಡುವ ಕಾರ್ಯವಾಗಬೇಕು. ಕನ್ನಡ ನೆಲದ ಪ್ರತಿಭೆಗಳು ಪ್ರಪಂಚದಾದ್ಯಂತ ಬೆಳೆಯಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಗೋಪಾಲ್ ಗೌಡ ಮಾತನಾಡಿ, ಕರ್ನಾಟಕದಲ್ಲಿರುವ ನಾವೆಲ್ಲರೂ ಒಂದೇ. ಎಲ್ಲರೂ ಸಹೋದರ ಭಾವನೆ ಹೊಂದಿರಬೇಕು. ಕನ್ನಡ ಸಾಹಿತ್ಯ, ಸಂಸ್ಕೃತಿ. ಕಲೆಯನ್ನು ಗೌರವಿಸಬೇಕು. ಆಂಧ್ರ ಪ್ರದೇಶ, ತಮಿಳುನಾಡು ಗಡಿಯಲ್ಲಿ ಕನ್ನಡವನ್ನು ಮಾತೃ ಭಾಷೆಯಾಗಿ ಬಳಸುವ ಸಂಖ್ಯೆ ಗಣನೀಯವಾಗಿದ್ದು, ಗಡಿ ಜಿಲ್ಲೆ ಕೋಲಾರದಲ್ಲಿ ಕನ್ನಡ ಉಳಿಸಿ, ಬೆಳೆಸುವಲ್ಲಿಯೂ ಹಲವಾರು ಕವಿಗಳು, ನಾಯಕರು ಮತ್ತು ಮಾಧ್ಯಮಗಳು ಶ್ರಮಿಸಿವೆ. ಕನ್ನಡ ಅಭಿವೃದ್ಧಿಯ ಕಾರ್ಯದಲ್ಲಿ ನಾವೂ ಕಾರ್ಯಪ್ರವೃತ್ತರಾಗಿ ಕರ್ನಾಟಕವು ಸರ್ವ ಜನಾಂಗದ, ಸರ್ವೋದಯದ, ವಿಶ್ವಮಾನವರ ರಾಜ್ಯವಾಗಬೇಕು ಎಂದರು.
ಅದ್ದೂರಿ ಮೆರವಣಿಗೆ: ರಥಯಾತ್ರೆಯು ನಗರದ ರಾಜಬೀದಿಗಳಲ್ಲಿ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಸಾಗಿತು. ಕಲಾತಂಡಗಳ ಕಲಾವಿದರ ಡೊಳ್ಳುಕುಣಿತ, ಸೋಮನ ಕುಣಿತ, ಶಾಲಾ-ಕಾಲೇಜು ಮಕ್ಕಳು ಕನ್ನಡ ಬಾವುಟ ಹಿಡಿದು, ಕನ್ನಡಪರ ಘೋಷಣೆಗಳು ಕೂಗಿ, ಭಾಷಾಭಿಮಾನ ಮೆರೆದರು.ಅಪರ ಜಿಲ್ಲಾಧಿಕಾರಿ ಮಂಗಳ, ಉಪ ವಿಭಾಗಾಧಿಕಾರಿ ಡಾ.ಮೈತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ, ನಗರಸಭೆ ಆಯುಕ್ತ ಶಿವಾನಂದ್, ಕನ್ನಡ ಪರ ಹೋರಾಟಗಾರರು ಹಾಗೂ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.