ಸೂಕ್ತ ಚಿಕಿತ್ಸೆ ಪಡೆದರೆ ಕುಷ್ಠರೋಗದಿಂದ ಮುಕ್ತಿ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

Sparsh Leprosy Awareness Movement Mandya
Published on

ಮಂಡ್ಯ: ಮಹಾತ್ಮ ಗಾಂಧೀಜಿ ಕುಷ್ಠರೋಗ ಮುಕ್ತ ಸಮಾಜವನ್ನು ನಿರ್ಮಿಸುವ ಕನಸು ಹೊತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರು ಹುತಾತ್ಮರಾದ ಜ.30ರಂದು ಸ್ಪರ್ಶ್ ಕುಷ್ಠರೋಗದ ಅರಿವು ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಸ್ಪರ್ಶ್ ಕುಷ್ಠ ರೋಗ ಅರಿವು ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕುಷ್ಠರೋಗವನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಿ ವೈದ್ಯರ ಬಳಿ ಪರೀಕ್ಷೆಗೆ ಒಳಗಾಗಿ ಚಿಕಿತ್ಸೆ ಪಡೆದು ಗುಣಮುಖ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.

ಕುಷ್ಠರೋಗ ಗುಣಮುಖವಾಗುವುದಿಲ್ಲ ಎಂಬ ಮೂಢನಂಬಿಕೆ ಸಾರ್ವಜನಿಕರಿಗಿದೆ. ಅದನ್ನು ಹೋಗಲಾಡಿಸಬೇಕು. ಇತರೆ ಕಾಯಿಲೆಗಳಂತೆ ಇದೂ ಸಹ ಸಾಮಾನ್ಯ ರೋಗ. ಬಹುಔಷಧ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಬಹುದಾದ ಕಾಯಿಲೆ ಎನ್ನುವುದರ ಅರಿವು ಮೂಡಿಸಬೇಕು ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಮಾತನಾಡಿ, ಜನರಲ್ಲಿ ಕುಷ್ಠರೋಗದ ಕುರಿತು ಇರುವ ಅವೈಜ್ಞಾನಿಕ ನಂಬಿಕೆಯನ್ನು ಹೋಗಲಾಡಿಸಿ, ಜನರಿಗೆ ಕುಷ್ಠರೋಗದ ಕುರಿತು ಅರಿವು ಮೂಡಿಸುವುದು ಈ ಆಂದೋಲನದ ಮೂಲ ಉದ್ದೇಶ. ರೋಗದ ಮುನ್ಸೂಚನೆ ಬಂದಲ್ಲಿ ಯಾವುದೇ ಭಯ ಪಡದೆ ಚಿಕಿತ್ಸೆ ಪಡೆದುಕೊಳ್ಳಿ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಧನುಷ್, ಡಾ.ಜಿ.ಬೆಟ್ಟಸ್ವಾಮಿ, ಡಾ.ಕುಮಾರ್, ಡಾ.ಸೋಮಶೇಖರ್, ಡಾ.ಕೆ.ಪಿ.ಅಶ್ವಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಸ್.ರಾಜಮೂರ್ತಿ ಇತರರಿದ್ದರು.

ಜಿಲ್ಲಾಧಿಕಾರಿ ಕಚೇರಿಯಿಂದ ಹೊರಟ ಜಾಥಾ ನಗರದ ಪ್ರಮುಖ ಬೀದಿ ಮೂಲಕ ಸಾಗಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ಮುಕ್ತಾಯವಾಯಿತು. ವಿವಿಧ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net