ಸ್ಪಾರ್ಕ್ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಅವಘಡ, ಕಾರ್ವಿುಕ ಸಾವು ಕುಟುಂಬಸ್ಥರಿಂದ ಪ್ರತಿಭಟನೆ

2-RNR-01 fire
Published on

ರಾಣೆಬೆನ್ನೂರ: ಇಲ್ಲಿಯ ಮಾರುತಿ ನಗರದ ಸ್ಪಾರ್ಕ್ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಮಂಗಳವಾರ ಸಂಭವಿಸಿದ ಸ್ಪೋಟದಲ್ಲಿ ಗಾಯಗೊಂಡ ಏಳು ಜನರಲ್ಲಿ ಬುಧವಾರ ಓರ್ವ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ಬ್ಯಾಡಗಿ ತಾಲೂಕಿನ ಬೆಳಕೇರಿ ಗ್ರಾಮದ ಶಂಭುಲಿಂಗನಗೌಡ ದ್ಯಾವಣ್ಣನವರ (42) ಮೃತ ದುರ್ದೈವಿ.


ಇವರು ನಗರದ ವಿಘ್ನೕಶ್ವರ ಸ್ಪಾರ್ಕ್ ತಯಾರಿಕೆ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಸಂಭವಿಸಿದ ಆ ಘಟನೆಯಲ್ಲಿ ಗಾಯಗೊಂಡಿದ್ದ ಇವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಪ್ರತಿಭಟನೆ: ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಮೃತ ಶಂಭುಲಿಂಗಪ್ಪ ಕುಟುಂಬಸ್ಥರು ನಗರದ ತಾಲೂಕು ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ನೇತೃತ್ವ ವಹಿಸಿದ್ದ ಹೊನ್ನಪ್ಪ ದ್ಯಾಮನಗೌಡ್ರ ಮಾತನಾಡಿ, ಅವಘಡದಲ್ಲಿ ಅಸುನೀಗಿದ ಶಂಭುಲಿಂಗಪ್ಪನ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಸದ್ಯ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವವರ ಆಸ್ಪತ್ರೆಯ ಖರ್ಚನ್ನು ಸ್ಪಾರ್ಕ್ ಕ್ಯಾಂಡಲ್ ಘಟಕದ ಮಾಲೀಕರು ಭರಿಸಬೇಕು ಎಂದು ಆಗ್ರಹಿಸಿದರು.


ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಗುರುಬಸವರಾಜ ಮಾತನಾಡಿ, ಬೆಂಕಿ ಅವಘಡದ ಕುರಿತು ಶಾಸಕ ಪ್ರಕಾಶ ಕೋಳಿವಾಡ ಜತೆ ಸಮಾಲೋಚಿಸಿದ್ದೇನೆ. ನಮ್ಮ ಕಚೇರಿಯಿಂದ ಸಂಬಂಧಿಸಿದ ದಾಖಲೆ ಪತ್ರಗಳನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಕಳುಹಿಸಲಾಗುವುದು. ಸಿಎಂ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.


ಪ್ರಮುಖರಾದ ವಿಜಯ ಬಳ್ಳಾರಿ, ದ್ಯಾಮನಗೌಡ ಪೂಜಾರ, ಮಾಲತೇಶ ದೊಡ್ಡಮನಿ, ಉಜ್ಜಪ್ಪ ದೇವರಗುಡ್ಡ, ಅಣ್ಣಪ್ಪ ದ್ಯಾಮನಗೌಡ್ರ, ಶಿವಣ್ಣ ಶಂಕರಗೌಡ ಪಾಟೀಲ, ಮಾಲತೇಶ ಹೊಳಿಯಮ್ಮನವರ, ರಾಕು ಯಳವಳಿ, ಶಿವಾನಂದ ದ್ಯಾಮನಗೌಡ್ರ, ರಾಮಣ್ಣ ದ್ಯಾಮನಗೌಡ್ರ, ಮಾಲತೇಶ ಆಲದಗೇರಿ, ರಾಜು ಶಿವಕ್ಕನವರ, ಬಸವರಾಜ ವಡ್ಡರಹಳ್ಳಿ, ಸಂಪತ್ ನಾಗರಹಳ್ಳಿ, ಮಲ್ಲಿಕಾರ್ಜುನ ಬಿದರಕಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net