

ಹುಬ್ಬಳ್ಳಿ: ಡಿಜಿಟಲ್ ಯುಗ, ಸೋಷಿಯಲ್ ಮೀಡಿಯಾ ಪ್ರಭಾವದ ಮಧ್ಯೆಯೂ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸಬಹುದು. ಅದಕ್ಕಾಗಿ ಪಾಲಕರು ಒಂದಿಷ್ಟು ಸಮಯ ಮಕ್ಕಳಿಗಾಗಿ ಮೀಸಲಿಡಬೇಕು ಎಂದು ಖ್ಯಾತ ಲೇಖಕಿ, ರಾಜ್ಯಸಭಾ ಸದಸ್ಯೆ ಡಾ. ಸುಧಾ ಮೂರ್ತಿ ಸಲಹೆ ನೀಡಿದರು.
ಇಲ್ಲಿಯ ಸಪ್ನ ಬುಕ್ ಹೌಸ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು. ಕಥೆ, ಕಾದಂಬರಿಕಾರ ಜೋಗಿ ಅವರು ನಡೆಸಿಕೊಟ್ಟ ಸಂವಾದದಲ್ಲಿ ಅವರು ಹಲವು ವಿಚಾರಗಳನ್ನು ಹಂಚಿಕೊಂಡರು. ನಂತರ ಕೇಳುಗರ ಪ್ರಶ್ನೆಗಳಿಗೂ ಉತ್ತರಿಸಿದರು.
ಮಕ್ಕಳ ಓದಿಗೆ ಇಂದು ಬಹಳಷ್ಟು ಅಡೆತಡೆಗಳು ಇವೆ. ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುವವರು ಇದ್ದರೆ ತೊಂದರೆ ಇನ್ನೂ ಜಾಸ್ತಿ. ಮಕ್ಕಳು ಕೆಡುವುದಕ್ಕೆ ಬಹಳಷ್ಟು ದಾರಿಗಳಿವೆ. ಅವುಗಳನ್ನು ಪಾಲಕರು ಗಮನಿಸಬೇಕು. ವಿದ್ಯೆ ಬೇಕಾದರೆ ಅಧ್ಯಯನ, ಕಲಿಕೆ, ಅನುಭವ ಎಲ್ಲವೂ ಬೇಕಾಗುತ್ತದೆ ಎಂದು ಹೇಳಿದರು.