

ಪ್ರಕಾಶ್ ಮಂಜೇಶ್ವರ
ಜಾಗತಿಕ ಮಟ್ಟದಲ್ಲಿ ಕೊವಿಡ್ 19ನಿಂದ ಅತಿ ಹೆಚ್ಚು ಹೈರಾಣಾಗಿರುವ ದೇಶಗಳಲ್ಲಿ ಸ್ಪೇನ್ ಎರಡನೇ ಸ್ಥಾನದಲ್ಲಿದೆ. ಶುಕ್ರವಾರ ಒಂದೇ ದಿನ ಸ್ಪೇನ್‌ನಲ್ಲಿ 850 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಅಲ್ಲಿನ ರಸ್ತೆಗಳಲ್ಲಿ ಈಗ ಪೊಲೀಸರ ಹಾಗೂ ಸೈನಿಕರು ಮಾತ್ರ.
ಸ್ಪೇನ್‌ನ ಸದ್ಯದ ಪರಿಸ್ಥಿತಿಯನ್ನು ವಿಜಯವಾಣಿಯೊಂದಿಗೆ ತೆರೆದಿಟ್ಟಿರುವವರು ಅಲ್ಲಿನ ಮಾರ್ಬೆಲ್ಲಾ ನಗರದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಮತ್ತು ವೆಬ್ ಡಿಸೈನ್ ಕ್ಷೇತ್ರದಲ್ಲಿ ದುಡಿಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪಾಲಡ್ಕ ಮೂಲದ ಈಗನ್ ಸ್ಟೀವನ್ ಡಾಂಟಿಸ್.
ಸುಂದರ ಕಡಲ ಕಿನಾರೆ, ವಿಶಿಷ್ಟ ಸಂಸ್ಕೃತಿ, ಶ್ರೀಮಂತ ನಗರಗಳನ್ನು ಹೊಂದಿರುವ ಆಗ್ನೇಯ ಯುರೋಪ್‌ನ ಐಬೀರಿಯನ್ ದ್ವೀಪ ಕಲ್ಪದಲ್ಲಿರುವ ಸ್ಪೇನ್‌ನ ರಸ್ತೆಗಳಲ್ಲಿ ಈಗ ಬರೀ ಪೊಲೀಸರು ಮತ್ತು ಸೈನಿಕರೇ ಗೋಚರಿಸುತ್ತಾರೆ. ಸರ್ಕಾರದ ಸೂಚನೆಯಂತೆ ಬಹುತೇಕ ವಿದೇಶಿ ಪ್ರವಾಸಿಗರು ತಾಯ್ನಡಿಗೆ ಮರಳಿದ್ದಾರೆ. ಭಾರತೀಯರ ತಂಡವೊಂದು ರಾಜಧಾನಿ ಮ್ಯಾಡ್ರಿಡ್‌ನಲ್ಲಿ ಬಾಕಿಯಾಗಿದ್ದು, ಅವರನ್ನು ಕರೆದೊಯ್ಯಲು ಭಾರತದಿಂದ ಯಾವುದೇ ಸಂದರ್ಭದಲ್ಲೂ ವಿಶೇಷ ವಿಮಾನ ಬರಬಹುದು ಎಂಬುದು ಭಾರತೀಯ ರಾಯಭಾರಿ ಕಚೇರಿಯ ಮಾಹಿತಿ.
ಗರಿಷ್ಠ ಸಾವು: ಶುಕ್ರವಾರ ತನಕ ಇಲ್ಲಿ ಕರೊನಾ ಸೋಂಕಿಗೆ ಒಳಗಾದವರು 1.17 ಲಕ್ಷ ಜನ. ಮೃತಪಟ್ಟವರು 10,935. ಸೋಂಕು ಪೀಡಿತರಲ್ಲಿ ವೃದ್ಧರು ಮತ್ತು ಮುಂಚಿತವಾಗಿಯೇ ಗಂಭೀರ ಆರೋಗ್ಯ ಸಮಸ್ಯೆಗಳಿದ್ದವರು ಅಧಿಕ ಪ್ರಮಾಣದಲ್ಲಿ ಸಾವನ್ನಪ್ಪಿದ್ದಾರೆ. ವಿದೇಶಿಯರ ಅಧಿಕ ಓಡಾಟವಿರುವ ಮ್ಯಾಡ್ರಿಡ್‌ನಲ್ಲಿ ಅತ್ಯಧಿಕ ಸೋಂಕು ಹಾಗೂ ಸಾವುಗಳು ಸಂಭವಿಸಿವೆ. ಕರೊನಾ ಸೋಂಕಿನಿಂದ ಮೃತಪಟ್ಟ ಫುಟ್‌ಬಾಲ್ ತರಬೇತುದಾರ 21 ವರ್ಷದ ಫ್ರಾನ್ಸಿಸ್ಕೊ ಗಾರ್ಸಿಯಾ ಅವರ ಮನೆಗೆ ನಮ್ಮ ಮನೆಯಿಂದ ಕೇವಲ ಎರಡು ನಿಮಿಷದ ದಾರಿ. ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರಿಗೆ ಕರೊನಾ ಸೋಂಕು ಉಂಟಾಗಿತ್ತು.
ಕರಾವಳಿ ಜನ ಸುರಕ್ಷಿತ: ನಾವು ವಾಸಿಸುವ ಮಾರ್ಬೆಲ್ಲಾ ನಗರ ಕಡಲ ತೀರದಲ್ಲಿದ್ದು, ರಾಜಧಾನಿಯಿಂದ ಸುಮಾರು 584 ಕಿ.ಮೀ. ದೂರದಲ್ಲಿದೆ. ಇಲ್ಲಿ ಕರ್ನಾಟಕದ ಕುಟುಂಬಗಳಿದ್ದು, 20 ಕನ್ನಡಿಗರು ಇದ್ದಾರೆ. ನಾನು ತಿಳಿದಿರುವ ಹಾಗೆ ಈ ಭಾಗದ ಕನ್ನಡಿಗರೆಲ್ಲರೂ ಸುರಕ್ಷಿತವಾಗಿದ್ದಾರೆ. ಮಂಗಳೂರು, ದೇರಳಕಟ್ಟೆ, ಬಜ್ಪೆ, ಉಡುಪಿ ನಿವಾಸಿಗಳು ಇಲ್ಲಿದ್ದಾರೆ. ಕೇರಳೀಯರು, ಪಂಜಾಬಿಗಳೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಹೊರಗೆ ತಿರುಗಾಡಲು ಸಾಧ್ಯವಾಗದೆ ಕನ್ನಡಿಗರು ದೂರವಾಣಿ, ವಾಟ್ಸಾಪ್ ಸಂಪರ್ಕದಲ್ಲಿದ್ದೇವೆ.
ಭಾರತೀಯರ ಉದ್ಯಮಕ್ಕೆ ಹೊಡೆತ: ಇಲ್ಲಿ ನೆಲೆಸಿರುವ ಕರಾವಳಿಯ ಜನರ ಸಹಿತ ಹೆಚ್ಚಿನ ಭಾರತೀಯರು ಹೋಟೆಲ್ ಉದ್ಯಮ ನಡೆಸುತ್ತಿದ್ದು, ಅವುಗಳೆಲ್ಲ ಈಗ ಮುಚ್ಚಿವೆ. ಹೋಟೆಲ್ ಸಹಿತ ಸಣ್ಣ ಕೈಗಾರಿಕೆಗಳಿಗೆ ನೆರವಿನ ಭರವಸೆ ನೀಡಿದೆ. ಉದ್ಯೋಗದಲ್ಲಿ ಇದ್ದು, ಈಗ ವೇತನ ಪಡೆಯದವರು, ಆರ್ಥಿಕ ನೆರವಿಗೆ ಅರ್ಜಿ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ. ನಾವು ಇಲ್ಲಿ ಪಾವತಿಸುವ ತೆರಿಗೆಯಲ್ಲಿ ಉಚಿತ ಆರೋಗ್ಯ ಸೇವೆ ಹಾಗೂ ಸಾಮಾಜಿಕ ಭದ್ರತೆ ಪಡೆಯಲು ಅರ್ಹರಾಗಿದ್ದೇವೆ. ಮಾರ್ಚ್ 16ರಿಂದ ಲಾಕ್‌ಡೌನ್ ಘೋಷಿಸಲಾಗಿದ್ದು, ಈ ಪರಿಸ್ಥಿತಿ ಮೇ ತನಕ ಅಥವಾ ಪಾಸಿಟಿವ್ ಪ್ರಕರಣಗಳು ಜೀರೊ ಆಗುವ ತನಕ ಮುಂದುವರಿಯಬಹುದು.
ಚೀನಾ ಸಂಪರ್ಕ: ದೇಶದ ರಾಜಧಾನಿಯಲ್ಲಿ ಮುಖ್ಯವಾಗಿ ಚೀನಾದ ಮಳಿಗೆಗಳು ಇದ್ದು ಅಲ್ಲಿನ ವಸ್ತುಗಳು ಯಥೇಚ್ಛವಾಗಿ ಬರುತ್ತಿರುತ್ತವೆ. ಉತ್ತಮ ಪ್ರವಾಸಿ ಸ್ಥಳವಾಗಿ ಗುರುತಿಸಿಕೊಂಡಿರುವ ಸ್ಪೇನ್‌ಗೆ ವಿದೇಶಿಯರು ಕೂಡ ಗರಿಷ್ಠ ಸಂಖ್ಯೆಯಲ್ಲಿ ಬರುತ್ತಾರೆ. ಫೆಬ್ರವರಿ ಕೊನೆಯಲ್ಲೇ ಇಲ್ಲಿ ಸೋಂಕು ಕಾಣಿಸಿಕೊಂಡಿದ್ದರೂ ಸರ್ಕಾರ ತಡವಾಗಿ ಬಿಗು ಕ್ರಮಗಳನ್ನು ಕೈಗೊಂಡಿರುವುದು ಇಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಲು ಮುಖ್ಯ ಕಾರಣ. ಪ್ರಸ್ತುತ ಸರ್ಕಾರ ಪರಿಸ್ಥಿತಿ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಂಡಿದೆ. ದೈನಂದಿನ ದಿನಸಿ ಸಾಮಗ್ರಿ, ಆಸ್ಪತ್ರೆ, ಮೆಡಿಕಲ್‌ಗಳಿಗೆ ಮಾತ್ರ ಹೊರಗೆ ತೆರಳಲು ಅವಕಾಶವಿದೆ. ಹೊರಗೆ ಓಡಾಡುವವರು ಗ್ಲೌಸ್, ಮುಖಕ್ಕೆ ಮಾಸ್ಕ್ ಧರಿಸಲೇಬೇಕು. ನಿಯಮ ಉಲ್ಲಂಘಿಸಿದರೆ ಭಾರತದ 42,000 ರೂ. ನಿಂದ 25 ಲಕ್ಷ ರೂ. ತನಕ ದಂಡ ವಿಧಿಸಲಾಗುತ್ತದೆ. ಜೈಲು ಶಿಕ್ಷೆ ವಿಧಿಸಲು ಕೂಡ ಕಾನೂನಿನಲ್ಲಿ ಅವಕಾಶವಿದೆ. ಕೋಸ್ಟಾ ಡೆಲ್ ಆಸ್ಪತ್ರೆ ಸ್ವಲ್ಪ ದೂರದಲ್ಲಿರುವ ಲೋಸ್ ಮೊಂಟೆರೋಸ್ ಹೋಟೆಲನ್ನೇ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ.
ಭಾರತೀಯರಲ್ಲಿ ಮನವಿ: ಭಾರತದಲ್ಲಿ ಇನ್ನೂ ಕೆಲವರು ಲಾಕ್‌ಡೌನ್ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡ ಹಾಗೆ ಕಾಣುತ್ತಿಲ್ಲ. ಹಲವೆಡೆ ಜನದಟ್ಟಣೆ ಕಾಣುತ್ತಿದೆ. ಜಗತ್ತಿನ ವಿವಿಧೆಡೆ ಮುಖ್ಯವಾಗಿ ಅಮೇರಿಕಾ, ಇಟಲಿ, ಸ್ಪೇನ್‌ನಂಥ ದೇಶಗಳ ಅನಾಹುತಗಳು ನಮಗೆ ಪಾಠವಾಗಬೇಕು. ವಿಶಾಲ ಹಾಗೂ ಅಧಿಕ ಜನಸಂಖ್ಯೆ ಇರುವ ಭಾರತದಂಥ ರಾಷ್ಟ್ರಗಳಲ್ಲಿ ಈ ಸೋಂಕು ವೇಗವಾಗಿ ಹರಡಲು ಶುರುವಾದರೆ ಮುಂದಿನ ಪರಿಣಾಮ ಊಹಿಸುವುದು ಕೂಡ ಕಷ್ಟ. ನನ್ನ ದೇಶ ಬಾಂಧವರು ಈ ಬಗ್ಗೆ ವಿಶೇಷ ಗಮನ ನೀಡುವಂತೆ ವಿನಂತಿ ಎಂದು ಈಗನ್ ಸ್ಟೀವನ್ ಡಾಂಟಿಸ್ ವಿನಂತಿಸಿಕೊಂಡಿದ್ದಾರೆ.