ಬಾಹ್ಯಾಕಾಶದಲ್ಲೂ ಪ್ರವಾಸೋದ್ಯಮ : ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್

space tourism
Published on

ಮೈಸೂರು: ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಈ ಹಿಂದೆ ಕೇವಲ ವಿವಿಧ ದೇಶಗಳು ಮಾತ್ರ ಹೂಡಿಕೆ ಮಾಡುತಿತ್ತು. ಆದರೆ, ಇದೀಗ ಬಾಹ್ಯಾಕಾಶ ಕ್ಷೇತ್ರದಲ್ಲೂ ಖಾಸಗಿ ಹೂಡಿಕೆ ಹೆಚ್ಚಾಗುತ್ತಿದ್ದು, ಬಾಹ್ಯಾಕಾಶ ಪ್ರವಾಸೋದ್ಯಮ, ಬಾಹ್ಯಾಕಾಶ ವಸತಿ, ಬಾಹ್ಯಾಕಾಶ ಅಡ್ವೆಂಚರ್ ಸೇರಿದಂತೆ ಬಾಹ್ಯಾಕಾಶದ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಹೂಡಿಕೆ ನಡೆಯುತ್ತಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷರೂ ಆಗಿರುವ 14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನಾಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದರು.

ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ 14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ ವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಸಾಕಷ್ಟು ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಈ ಹಿಂದೆ ಮನುಷ್ಯ ಭೂಮಿ, ನೀರು ಹಾಗೂ ಆಕಾಶದಲ್ಲಿ ತನ್ನ ಪ್ರಭುತ್ವ ಸಾಧಿಸಿದ್ದ. ಆದರೆ, ಇದೀಗ ಬಾಹ್ಯಾಕಾಶ್ಯದಲ್ಲೂ ಮೇಲುಗೈ ತೋರಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದಾನೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಸರ್ಕಾರ ಮಾತ್ರವಲ್ಲದೆ ಖಾಸಗಿ ಉದ್ಯಮದವರು ಹೂಡಿಕೆ ಮಾಡುತ್ತಿದ್ದು, ಈಗಾಗಲೇ ಸಾಕಷ್ಟು ಕೆಲಸಗಳು ನಡೆಯುತ್ತಿವೆ ಎಂದರು.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹವಾಮಾನ ವೈಪರೀತ್ಯ ಈ ಹಿಂದೆ ಕಡಿಮೆ ಇತ್ತು. ಹಾಗಾಗಿ ಅಲ್ಪಾವಧಿ ಹಾಗೂ ದೀರ್ಘಾವಧಿಯ ನಿಖರ ವಾದ ಹವಾಮಾನ ವರದಿಯನ್ನು ನೀಡಲಾಗುತಿತ್ತು. ಆದರೆ, ಪ್ರಸಕ್ತ ವರ್ಷ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಹವಾಮಾನ ವೈಪರೀತ್ಯ ಕಂಡು ಬಂದಿದ್ದು, ಅಲ್ಲಿನ ವಿಜ್ಞಾನಿಗಳಿಗೂ ಹವಾಮಾನದ ಕುರಿತು ನಿಖರ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರ ಸಾಕಷ್ಟು ಬೆಳವಣಿಗೆ ಹೊಂದಿದೆ. ಇದರಿಂದ ಮನುಷ್ಯರಿಗೆ ಸಾಕಷ್ಟು ಅನುಕೂಲವಾಗಿದೆ. ಆದರೆ, ಈ ಕ್ಷೇತ್ರದಿಂದ ಸಮಸ್ಯೆ, ಸವಾಲುಗಳು ಸಹ ಎದುರಾಗುತ್ತಿದೆ. ಅದಕ್ಕೆಲ್ಲ ನಾವು ಉತ್ತರವನ್ನು ಕಂಡುಕೊಳ್ಳಬೇಕು. ಅಲ್ಲದೆ ಈ ಕ್ಷೇತ್ರ ಉಂಟು ಮಾಡುತ್ತಿರುವ ಅನಾಹುತಕ್ಕೂ ಪರಿಹಾರ ಕಂಡುಕೊಳ್ಳಬೇಕು ಎಂದರು.

ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್
ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್

ಮನುಷ್ಯ ಭೂಮಿ ಮೇಲೆ ನಿರಂತರವಾಗಿ ಬದುಕಬೇಕಾದರೆ ಪ್ರತಿಯೊಂದು ಜೀವರಾಶಿ ಹಾಗೂ ಪ್ರಕೃತಿಯ ಬಗ್ಗೆ ಕಾಳಜಿ ವಹಿಸಬೇಕು. ಭೂಮಿಯ ಮಹತ್ವ ಅರಿತು ದುರುಪಯೋಗ ಮಾಡದೆ ಇದ್ದಾಗ ಮಾತ್ರ ಮನುಷ್ಯನ ಉಳಿವು ಸಾಧ್ಯ ಎಂದು ದೇಶದ ಋಷಿ ಮುನಿಗಳು ತಿಳಿಸಿದ್ದಾರೆ. ಋಷಿ ಮುನಿಗಳು ಹೇಳಿದ ರೀತಿಯಲ್ಲಿ ನಾವು ಬದುಕಬೇಕು ನಡೆಸಿದರೆ ಭೂಮಿಯ ಎಲ್ಲ ಜೀವರಾಶಿಗಳು ಉಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮನುಷ್ಯನ ನಡವಳಿಕೆ ಬದಲಾಯಿಸುತ್ತದೆ ಮೊಬೈಲ್…!
ಮೊಬೈಲ್ ಸೇರಿದಂತೆ ವಿವಿಧ ಹೊಸ ತಂತ್ರಜ್ಞಾನದ ಆವಿಷ್ಕಾರಗಳು ಮನುಷ್ಯನ ನಡವಳಿಕೆಯನ್ನು ಸಹ ಬದಲಾಯಿಸುವ ಸಾಮರ್ಥ್ಯ ಹೊಂದಿವೆ. ಅಲ್ಲದೆ, ಅವು ಮನುಷ್ಯನನ್ನು ಗ್ರಾಹಕನನ್ನಾಗಿ ಪರವರ್ತಿಸುವ ಸಾಮರ್ಥ್ಯ ಹೊಂದಿವೆ. ನಾವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳನ್ನು ಸಂಗ್ರಹಿಸಿ ವಿಶ್ಲೇಷಿಸುವ ಕಾರ್ಯ ನಡೆಯುತ್ತಿದೆ. ಆ ಮೂಲಕ ನಮ್ಮ ಅಭಿರುಚಿಗೆ ತಕ್ಕ ವಿಷಯಗಳು ನಮ್ಮ ಮೊಬೈಲ್ ಮೂಲಕ ದೊರೆಯುವಂತೆ ಮಾಡಲಾಗುತ್ತಿದೆ. ಬ್ರಿಟೀಷರ ಆಳ್ವಿಕೆಯಲ್ಲಿ ಇಲ್ಲಿನ ಕಚ್ಚಾ ಸಾಮಗ್ರಿಗಳನ್ನು ಹೊರಗೆ ಸಾಗಿಸಿ ವಿವಿಧ ಉತ್ಪನ್ನಗಳನ್ನು ತಯಾರಿಸಿ ಬ್ರಿಟೀಷರು ಉತ್ತಮ ಲಾಭ ಗಳಿಸುತ್ತಿದ್ದರು. ಅದೇ ರೀತಿ ಆಧುನಿಕ ಯುಗದಲ್ಲಿ ಇಲ್ಲಿನ ಜನರ ಮಾಹಿತಿ ಸಂಗ್ರಹಿಸಿ ಲಾಭ ಪಡೆಯುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಅನಾಹುತದ ಕುರಿತು ಕೂಡ ಎಚ್ಚರ ವಹಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಮನುಷ್ಯನಲ್ಲಿ ರೇಡಿಯೇಷನ್ ಪ್ರಯೋಗ?
ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಷನ್ ಮೂಲಕ ಮೊಬೈಲ್-ಮೊಬೈಲ್‌ಗಳು ನಡುವೆ ಸಂಪರ್ಕ ಏರ್ಪಡುತ್ತದೆ. ಇದೇ ರೀತಿಯ ಸಂಪರ್ಕ ಜೀವಿಗಳಲ್ಲೂ ಸಾಧ್ಯವಿದೆಯೇ ಎಂಬ ಪ್ರಶ್ನೆ ಎದುರಾದರೆ ಇಲ್ಲ ಎಂದು ಸುಲಭವಾಗಿ ನಿರಾಕರಣೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಇತ್ತೀಚಿನ ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆಯ ವೇಗ ಆ ರೀತಿ ಇದೆ ಎಂದರು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಮೈಸೂರು ವಿಶ್ವವಿದ್ಯಾಲಯ ಕುಲಪತಿ ಡಾ. ಜಿ. ಹೇಮಂತ ಕುಮಾರ್, ಕುವೆಂಪು ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ, ಸಂಘದ ಅಧ್ಯಕ್ಷ ಗಿರೀಶ ಬಿ. ಕಡ್ಲೇವಾಡ, ಗೌರವ ಕಾರ್ಯದರ್ಶಿ ಸಿ. ಕೃಷ್ಣೇಗೌಡ, ಖಜಾಂಚಿ ಈ.ಬಸವರಾಜ್, ಸ್ಥಾಪಕ ಸದಸ್ಯೆ ಶ್ರೀಮತಿ ಹರಿಪ್ರಸಾದ್, ಜಿಲ್ಲಾಧ್ಯಕ್ಷ ಡಾ. ಆರ್. ಶೇಖರ್ ನಾಯಕ್, ಸಮ್ಮೇಳನದ ರಾಜ್ಯ ಸಂಯೋಜಕ ಎ.ಎನ್. ಮಹೇಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net