

ಮಂಡ್ಯ: ಡಿಸೆಂಬರ್ ಅಂತ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಗರದ ಹೊರವಲಯದ ಜಾಗ ಅಂತಿಮಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ನೀಲಿನಕ್ಷೆ ಸಿದ್ಧಪಡಿಸುವ ಹೊಣೆಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ.
ಬರೋಬರಿ ಮೂರು ದಶಕದ ನಂತರ ಹಾಗೂ ಮೂರನೇ ಬಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸುವ ಅವಕಾಶ ಜಿಲ್ಲೆಗೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ನುಡಿಜಾತ್ರೆ ಯಾವ ಸ್ಥಳದಲ್ಲಿ ಆಯೋಜಿಸಿದರೆ ಉತ್ತಮ ಎನ್ನುವ ಚರ್ಚೆ ನಡೆಯುತ್ತಲೇ ಇದೆ. ಈ ನಡುವೆ ಜಿಲ್ಲಾಡಳಿತ ನಗರದ ಹೊರವಲಯ ಅಂದರೆ ಅಮರಾವತಿ ಹೋಟೆಲ್ ಸಮೀಪ ಆಯೋಜನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ನಾಡು, ನುಡಿ ವಿಚಾರದಲ್ಲಿ ಯಾವಾಗಲೂ ಮುಂದಿರುವ ಮಂಡ್ಯದಲ್ಲಿ ಸಮ್ಮೇಳನವನ್ನು ಅದ್ಧೂರಿಯಾಗಿ ಆಚರಣೆ ಮಾಡಬೇಕೆನ್ನುವ ನಿಟ್ಟಿನಲ್ಲಿ ಎರಡು ತಿಂಗಳ ಹಿಂದಿನಿಂದಲೇ ಸಿದ್ಧತೆ ನಡೆಯುತ್ತಿದೆ. ಮಾತ್ರವಲ್ಲದೆ 25ಕ್ಕೂ ಹೆಚ್ಚು ಸಮಿತಿ ಹಾಗೂ ಕೆಲ ಉಪಸಮಿತಿಯನ್ನು ಮಾಡಲಾಗಿದ್ದು, ಆಯಾಯ ಸಮಿತಿ ಈಗಾಗಲೇ ಸಭೆಯನ್ನು ಮಾಡಿ ಒಂದಷ್ಟು ಪೂರ್ವ ತಯಾರಿ ಮಾಡಿಕೊಂಡಿವೆ. ಅದೇ ರೀತಿ ಸ್ಥಳಕ್ಕೆ ಸಂಬಂಧಿಸಿದಂತೆ ಅಮರಾವತಿ ಹೋಟೆಲ್ ಸಮೀಪ, ಚಿಕ್ಕಮಂಡ್ಯ, ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸುವ ಬಗ್ಗೆ ಚರ್ಚೆ ನಡೆದಿತ್ತು. ಇದೀಗ ಎಲ್ಲ ರೀತಿಯಲ್ಲಿಯೂ ಅನುಕೂಲವಾಗುವಂತೆ ಶ್ರೀನಿವಾಸಪುರ ಗೇಟ್ ಬಳಿಯೇ ನುಡಿಜಾತ್ರೆ ನಡೆಸಲು ತೀರ್ಮಾನಿಸಲಾಗಿದೆ.
ಅಮರಾವತಿ ಹೋಟೆಲ್ ಸಮೀಪ ಪ್ರಸ್ತುತ 53 ಎಕರೆ ಜಾಗವಿದೆ. ಇದರಲ್ಲಿ 50 ಸಾವಿರ ಜನರು ಕುಳಿತುಕೊಳ್ಳಬಹುದಾದ ದೊಡ್ಡ ವೇದಿಕೆ, ತಲಾ ಐದು ಸಾವಿರ ಜನರು ಕುಳಿತುಕೊಳ್ಳಬಹುದಾದಂತಹ ಎರಡು ಚಿಕ್ಕ ವೇದಿಕೆ, 950 ಪುಸ್ತಕ ಮಾರಾಟ ಮಳಿಗೆ ಹಾಗೂ ಪ್ರದರ್ಶನ, ಅಡುಗೆ ತಯಾರಿಸಲು ಹಾಗೂ ಊಟ ವಿತರಣೆಗೆ 10 ಎಕರೆ ಜಾಗವಿದೆ. ಇದಲ್ಲದೆ ವಿವಿಐಪಿ ಹಾಗೂ ವಿಐಪಿ ಪಾರ್ಕಿಂಗ್‌ಗೆ ಅಮರಾವತಿ ಹೋಟೆಲ್ ಜಾಗ ಬಳಸಿಕೊಳ್ಳಲು ಚಿಂತಿಸಲಾಗಿದೆ. ಅಂತೆಯೇ ಅಕ್ಕಪಕ್ಕದ ರೈತರ ಜಮೀನು ಪಡೆಯುವ ಸಂಬಂಧ ಚರ್ಚೆ ನಡೆದಿದ್ದು, ಅವರಿಂದ ಒಪ್ಪಿಗೆ ಪತ್ರ ಪಡೆಯುವ ನಿಟ್ಟಿನಲ್ಲಿ ಪ್ರಕ್ರಿಯೆ ನಡೆಯುತ್ತಿದೆ.
ಇದಲ್ಲದೆ ಜಿಲ್ಲೆ ಸೇರಿದಂತೆ ಹೊರಗಿನಿಂದ ಬರುವವರಿಗೆ ವಾಹನ ಪಾರ್ಕಿಂಗ್ ಮಾಡಲು ಅನುಕೂಲವಾಗುವಂತೆ ಮೈಷುಗರ್ ಕಾರ್ಖಾನೆಗೆ ಸೇರಿದ ನಗರದಲ್ಲಿರುವ 33 ಎಕರೆ, ಹೊರವಲಯದಲ್ಲಿರುವ ಖಾಸಗಿ ಲೇಔಟ್‌ನಲ್ಲಿ 22 ಎಕರೆ ಬಳಕೆ ಮಾಡಿಕೊಳ್ಳುವುದು. ಜನರು ಸಮ್ಮೇಳನದ ಸ್ಥಳಕ್ಕೆ ಹೋಗಿ ಮತ್ತು ವಾಪಸ್ ಬರುವವರಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಮುಖ್ಯವಾಗಿ ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಳ್ಳದಂತೆ ಪ್ರವೇಶ ಹಾಗೂ ನಿರ್ಗಮನದ ಬಗ್ಗೆ ಗಮನಹರಿಸಲಾಗುತ್ತಿದೆ.