ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ

Upp_Grama-sabhe
Published on

ಉಪ್ಪಿನಂಗಡಿ: ಘನ ತ್ಯಾಜ್ಯ ವಿಲೇವಾರಿಯ ವಿಚಾರದಲ್ಲಿ ಗ್ರಾಮಸ್ಥರು ಹಾಗೂ ಪಂಚಾಯಿತಿ ಸದಸ್ಯರು ಗ್ರಾಮದ ಹಿತದೃಷ್ಟಿಯ ನೆಲೆಗಟ್ಟಿನಲ್ಲಿ ಚಿಂತನೆ ನಡೆಸಬೇಕು. ಯೋಜನೆ ಯೋಗ್ಯರಿತಿಯಲ್ಲಿ ಅನುಷ್ಠಾನಿಸಲು ಸಹಕರಿಸಬೇಕೆಂದು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಲಾಯಿತು.

ಗ್ರಾಪಂನ ಸಮಾಜ ಮಂದಿರದಲ್ಲಿ ಲಲಿತಾ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ಜರುಗಿತು. ಪಿಡಿಒ ವಿಲ್ಫ್ರೆಡ್​ ಲಾರೆನ್ಸ್​ ರೋಡ್ರಿಗಸ್​ ಲೆಕ್ಕ ಪತ್ರಕ್ಕೆ ಮಂಜೂರಾತಿ ಪಡೆದರು.

ಹಿರಿಯ ಸದಸ್ಯ ಅಬ್ದುಲ್​ ರಹಿಮಾನ್​ ಮಾತನಾಡಿ, ಸುವ್ಯವಸ್ಥಿತ ಘನತ್ಯಾಜ್ಯದ ಡಂಪಿಂಗ್​ ಯಾರ್ಡ್​ಗೆ ಗ್ರಾಮದ ವಾರ್ಡ್​ವೊಂದರಲ್ಲಿ ಸ್ಥಳ ಗುರುತಿಸಲು ಹೋದಾಗ ಅಲ್ಲಿನ ಪಂಚಾಯಿತಿ ಸದಸ್ಯರಿಗೆ ನಿವಾಸಿಗರಿಂದ ತಡೆಹಿಡಿಯಲು ಒತ್ತಡ ಬಂದಿರುವುದನ್ನು ಉಲ್ಲೇಖಿಸಿ, ಎಲ್ಲ ವಾರ್ಡ್​ಗಳಲ್ಲಿ ಇದೇ ರೀತಿ ತಡೆದರೆ ತ್ಯಾಜ್ಯ ವಿಲೇವಾರಿ ನಿಭಾಯಿಸುವುದು ಹೇಗೆ ಎಂದು ಪ್ರಶ್ನೆಸಿದರಲ್ಲದೆ ಎಲ್ಲರೂ ಒಮ್ಮತದಿಂದ ಸಹಕರಿಸಿದರೆ ಕಂದಾಯ ನಿರೀಕ್ಷಕರಲ್ಲಿ ಜಾಗ ಗುರುತಿಸಲು ಒತ್ತಾಯಿಸಬಹುದೆಂದರು.

ಪಟ್ಟಣದ ಬ್ಯಾಂಕ್​ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದು ಕಡಿವಾಣ ಹಾಕಲು ವರ್ತಕರ ಸಹಕಾರ ಬಯಸುವುದು, ಪ್ರಯಾಣಿಕ ಸೇವೆ ನೀಡುವ ರಿಕ್ಷಾ ಹಾಗೂ ಜೀಪು ಚಾಲಕರನ್ನು ನಿಯಂತ್ರಿಸಲು ಅಗತ್ಯ ಮಾರ್ಗಸೂಚಿ ರಚನೆ, ಹೊಸ ಬಸ್​ ನಿಲ್ದಾಣದಲ್ಲಿ ಗ್ರಾಪಂನ ವಾಣಿಜ್ಯ ಕಟ್ಟಡಗಳ ನೆಪದಲ್ಲಿ ಬಹಳಷ್ಟು ಮಂದಿ ದ್ವಿಚಕ್ರ ವಾಹನ ನಿಲ್ಲಿಸಿ ಬಸ್ಸುಗಳ ನಿಲುಗಡೆ ಹಾಗೂ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿರುವ ಬಗ್ಗೆ ಅಗತ್ಯ ಕ್ರಮ, ಸಭೆಗೆ ಸ್ಥಳಿಯ ಸರ್ಕಾರಿ ಮಾದರಿ ಶಾಲಾ ಮುಖ್ಯಶಿಕ್ಷಕರನ್ನು ಕರೆಯಿಸಿ ಇಂಗು ಗುಂಡಿ ರಚನೆ ಕುರಿತು ನಿರ್ದೇಶನ ಮೊದಲಾದ ವಿಚಾರ ಪ್ರಸ್ತಾಪಿಸಲ್ಪಟ್ಟವು.

ಉಪಾಧ್ಯಕ್ಷೆ ವಿದ್ಯಾಲ ಪ್ರಭು, ಸದಸ್ಯರಾದ ಮಹಮ್ಮದ್​ ತೌಸಿಪ್​ ಯು.ಟಿ, ಧನಂಜಯ ನಟ್ಟಿಬೈಲ್​, ಲೋಕೇಶ ಬೆತ್ತೊಡಿ, ಶೋಭಾ, ರುಕ್ಮಿಣಿ, ವಿನಾಯಕ ಪೈ, ಜಯಂತಿ, ವನಿತಾ ಸುರೇಶ ಅತ್ರಮಜಲು, ಇಬ್ರಾಹಿಂ, ಉಷಾಮುಳಿಯ ಉಪಸ್ಥಿತರಿದ್ದರು. ಕಾರ್ಯದರ್ಶಿ ಗೀತಾ ಶೇಖರ್​ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net