

ಹುಬ್ಬಳ್ಳಿ : ಇಲ್ಲಿನ ವಿದ್ಯಾನಗರದಲ್ಲಿರುವ ಉಪ ನೋಂದಣಿ ಕಚೇರಿಯನ್ನು (ಉತ್ತರ) ಸ್ಥಳಾಂತರಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಿಗೆ ಪತ್ರ ಬರೆದಿದ್ದ ಪರಿಣಾಮದಿಂದಾಗಿ ಉಣಕಲ್ಲನಲ್ಲಿ ಈ ಕಚೇರಿಯ ಹೊಸ ಕಟ್ಟಡ ನಿರ್ವಣಕ್ಕೆ ಜಾಗ ನೀಡಲಾಗಿದೆ.
ಇದೀಗ ಈ ಜಾಗದಲ್ಲಿ ಉಪ ನೋಂದಣಿ ಕಚೇರಿ ಕಟ್ಟಡ ನಿರ್ವಣಕ್ಕೆ ಅನುಮೋದನೆ ಹಾಗೂ ಅನುದಾನ ಮಂಜೂರು ಮಾಡುವಂತೆ ಪ್ರಲ್ಹಾದ ಜೋಶಿ ಅವರು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಪತ್ರ ಬರೆದಿದ್ದಾರೆ.
ಇಲ್ಲಿನ ವಿದ್ಯಾನಗರದಲ್ಲಿರುವ ಉಪ ನೋಂದಣಿ ಕಚೇರಿಯಿಂದ ರಾಜ್ಯ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ಸಂದಾಯವಾಗುತ್ತದೆ. ಆದರೆ, ಈ ಕಚೇರಿಗೆ ತಲುಪಲು ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲ. ಕಚೇರಿಗೆ ತೆರಳಲು ಲಿಫ್ಟ್ ಸೇರಿದಂತೆ ಇತರ ಮೂಲ ಸೌಲಭ್ಯಗಳು ಇಲ್ಲ. ಹೀಗಾಗಿ, ಈ ಕಚೇರಿಯನ್ನು ಸ್ಥಳಾಂತರಿಸುವಂತೆ ಪ್ರಲ್ಹಾದ ಜೋಶಿ ಅವರು ಇತ್ತೀಚೆಗೆ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಿಗೆ ಪತ್ರ ಬರೆದಿದ್ದರು.
ಈ ಹಿನ್ನೆಲೆಯಲ್ಲಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದು, ಹೊಸ ಕಟ್ಟಡಕ್ಕೆ ಜಾಗ ಒದಗಿಸಲು ಕೋರಿದ್ದರು.
ಇದೀಗ ಉಣಕಲ್ಲನಲ್ಲಿ 563.9 ಚ.ಮೀ. ವಿಸ್ತೀರ್ಣದ ಜಾಗವನ್ನು ಉಪ ನೋಂದಣಿ ಕಚೇರಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಪ್ರಾಧಿಕಾರಿ ಮಂಜೂರಾತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.