ಸೂಕ್ಷ್ಮ,ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಎಸ್‌ಪಿ ಭೇಟಿ

13bhr 1 (2)
ಬಾಳೆಹೊನ್ನೂರಿನ ಬಿ.ಕಣಬೂರು ಗ್ರಾಮದಲ್ಲಿ ಅಕ್ಷರನಗರದ ಅತೀ ಸೂಕ್ಷ್ಮ ಮತಗಟ್ಟೆಗೆ ಎಸ್‌ಪಿ ಡಾ.ವಿಕ್ರಮ್ ಅಮಟೆ ಭೇಟಿ ನೀಡಿ ಪರಿಶೀಲಿಸಿದರು. ಪಿಎಸ್‌ಐ ರವೀಶ್ ಇದ್ದರು.
Published on

ಬಾಳೆಹೊನ್ನೂರು: ಶೃಂಗೇರಿ ಕ್ಷೇತ್ರದಲ್ಲಿನ ಸೂಕ್ಷ್ಮ,ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಸ್‌ಪಿ ಡಾ.ವಿಕ್ರಮ್ ಅಮಟೆ ಹೇಳಿದರು.
ಬಿ.ಕಣಬೂರು ಗ್ರಾಮದ ಅಕ್ಷರ ನಗರ ಹಾಗೂ ಕಡ್ಲೇಮಕ್ಕಿ ಮತಗಟ್ಟೆಗಳಿಗೆ ಮಂಗಳವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೃಂಗೇರಿ ವಿಧಾನಸಭಾ ವ್ಯಾಪ್ತಿಯಲ್ಲಿ ಮೊದಲ ದಿನ ಎರಡು ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಸ್ಥಳೀಯರೊಂದಿಗೆ ಮಾತುಕತೆ ಮಾಡಲಾಗಿದೆ. ಜತೆಗೆ ಚುನಾವಣಾ ಕರ್ತವ್ಯಕ್ಕೆ ಆಗಮಿಸುವ ಕೇಂದ್ರೀಯ ಮೀಸಲು ಪಡೆ ಸಿಬ್ಬಂದಿಗೆ ಉಳಿದುಕೊಳ್ಳಲು ಬಾಲಕಿಯರ ವಿದ್ಯಾರ್ಥಿ ನಿಲಯದ ಸ್ಥಳವನ್ನು ವೀಕ್ಷಿಸಲಾಗಿದೆ ಎಂದು ತಿಳಿಸಿದರು.
ಚುನಾವಣಾ ಸಿದ್ಧತೆಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ಯಾವ ತಯಾರಿ ಮಾಡಬೇಕು ಎಂದು ಪರಿಶೀಲಿಸಲಾಗಿದೆ. ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿ ಉತ್ತಮ ತಯಾರಿ ಮಾಡಿಕೊಂಡಿದ್ದು, ಇನ್ನು ಕೆಲವು ಅಗತ್ಯಗಳನ್ನು ಸಿದ್ಧ ಮಾಡಿಕೊಳ್ಳಲಾಗುವುದು ಎಂದರು.
ಠಾಣಾ ವ್ಯಾಪ್ತಿಯ ರೌಡಿಶೀಟರ್, ಕಿಡಿಗೇಡಿಗಳ ವಿರುದ್ಧ ಮುಂಜಾಗರೂಕ ಕ್ರಮವಾಗಿ ಚುನಾವಣಾ ಸಂದರ್ಭದಲ್ಲಿ 107, 110 ಸೆಕ್ಷನ್ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಅತೀ ಸೂಕ್ಷ್ಮ ಮತಗಟ್ಟೆ ವ್ಯಾಪ್ತಿಯಲ್ಲಿರುವ ಕಿಡಿಗೇಡಿಗಳಿಂದ ವಿಶೇಷ ಬಾಂಡ್‌ಗಳನ್ನು ಪಡೆಯಲಾಗುವುದು. ಪೊಲೀಸ್ ಇಲಾಖೆ ಅಧಿಕಾರಿಗಳು ಎಲ್ಲ ಮತಗಟ್ಟೆಗಳಿಗೆ ಭೇಟಿ ನೀಡಿ ಅಲ್ಲಿನ ಕಾನೂನು ಸುವ್ಯವಸ್ಥೆ, ಅಗತ್ಯತೆಗಳ ಕುರಿತು ಪರಿಶೀಲನೆ ನಡೆಸಲಿದ್ದು, ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಬಾರದಂತೆ ಸೂಕ್ತ ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net