ವಿದೇಶಿ ಯುವತಿ ಸಂಕಷ್ಟಕ್ಕೆ ಮಿಡಿದ ಎಸ್​ಪಿ ವರ್ತಿಕಾ ಕಟಿಯಾರ್

h29-Austrelian Lady
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಲಾಕ್​ಡೌನ್​ನಿಂದಾಗಿ ಮೂರು ತಿಂಗಳಿಂದ ನಗರದಲ್ಲಿ ಸಿಲುಕಿದ್ದ ವಿದೇಶಿ ಯುವತಿ ಸಂಕಷ್ಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಸ್ಪಂದಿಸಿದ್ದಾರೆ. ಬೆಂಗಳೂರು, ದೆಹಲಿ ಮಾರ್ಗವಾಗಿ ಆಸ್ಟ್ರೇಲಿಯಾಕ್ಕೆ ತೆರಳಲು ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಕಾರ್ಯಕ್ಕೆ ಡಿಸಿಪಿ ಪಿ. ಕೃಷ್ಣಕಾಂತ ಸಾಥ್ ನೀಡಿದ್ದಾರೆ.

ಆಸ್ಟ್ರೇಲಿಯಾ ನಿವಾಸಿ ಮೈಶಿಯಾನ್ ನಿಯಾಂಗ್ (30) ಸಂಕಷ್ಟಕ್ಕೆ ಸಿಲುಕಿದ್ದ ಯುವತಿ.

ಯೋಗ ಮತ್ತು ಅಧ್ಯಾತ್ಮ ಸಾಧನೆಗಾಗಿ ಮೈಶಿಯಾನ್ ಮೂರು ತಿಂಗಳ ಹಿಂದೆ ಹುಬ್ಬಳ್ಳಿಗೆ ಬಂದಿದ್ದರು. ಲಾಕ್​ಡೌನ್ ಹಿನ್ನೆಲೆಯಲ್ಲಿ ತವರಿಗೆ ಹೋಗಲಾಗದೇ ನಗರದಲ್ಲೇ ಉಳಿದಿದ್ದರು. ಕೆಲ ದಿನಗಳ ಬಳಿಕ ಕೈಯಲ್ಲಿದ್ದ ಹಣ ಖಾಲಿಯಾಗಿ ಸಂಕಷ್ಟಕ್ಕೆ ಈಡಾಗಿದ್ದರು. ನಗರದ ಹಳೇ ಬಸ್ ನಿಲ್ದಾಣದ ಎದುರಿನ ರೇಣುಕಾ ಲಾಡ್ಜ್​ನಲ್ಲಿ ವಾಸ್ತವ್ಯ ಹೂಡಿದ್ದರು. ವೀಸಾ ಅವಧಿ ಮುಗಿದ ಕಾರಣ ತವರಿಗೆ ಮರಳಲು ಆಗದೇ ಸಮಸ್ಯೆ ಉದ್ಭವಿಸಿತ್ತು. ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಗಮನಕ್ಕೂ ತಂದಿದ್ದಳು. ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಎಸ್​ಪಿ ವರ್ತಿಕಾ ಹಾಗೂ ಡಿಸಿಪಿ ಕೃಷ್ಣಕಾಂತ ಬಳಿ ಅಳಲು ತೋಡಿಕೊಂಡಿದ್ದರು. ಯುವತಿಯ ವಿವರ ಪಡೆದ ಎಸ್​ಪಿ, ಆಸ್ಟ್ರೇಲಿಯಾಕ್ಕೆ ತೆರಳಲು ವ್ಯವಸ್ಥೆ ಕಲ್ಪಿಸಿದರು.

ಉತ್ತರ ಚೈನಾದಲ್ಲಿ ಬಳಸುವ ಮ್ಯಾಂಡರಿಯನ್ ಭಾಷೆ ಮಾತನಾಡುತ್ತಾಳೆ. ಆಂಗ್ಲ ಭಾಷೆಯೂ ಬರುವುದಿಲ್ಲ. ಹಾಗಾಗಿ, ಭಾಷಾ ಸಮಸ್ಯೆ ಉಂಟಾಗಿತ್ತು. ಮಾಧ್ಯಮ ಮತ್ತು ಕ್ಯಾಮರಾ ಕಂಡರೆ ತಪ್ಪಿಸಿಕೊಂಡು ಹೋಗುತ್ತಿದ್ದಳು. ಪೊಲೀಸ್ ಸಿಬ್ಬಂದಿಯೊಬ್ಬರ ಜತೆಗೆ ಅವರನ್ನು ಎಸ್​ಪಿ ವರ್ತಿಕಾ, ಡಿಸಿಪಿ ಕೃಷ್ಣಕಾಂತ ಶುಕ್ರವಾರ ಬೆಳಗ್ಗೆ ಬೀಳ್ಕೊಟ್ಟರು.

ಕಾಲಿಗೆರಗಿದಳು: ಹುಬ್ಬಳ್ಳಿಯಿಂದ ಹೊರಡುವ ಮೊದಲು ಎಸ್​ಪಿ ವರ್ತಿಕಾ ಮತ್ತು ಡಿಸಿಪಿ ಕೃಷ್ಣಕಾಂತ ಅವರ ಕಾಲಿಗೆರಗಿದ ಮೈಶಿಯಾನ್, ನೆರವಾಗಿದ್ದಕ್ಕೆ ಧನ್ಯವಾದ ಸಮರ್ಪಿಸಿದರು.

ಚನ್ನಮ್ಮ ವೃತ್ತದಲ್ಲಿ ಕಂಡಿದ್ದ ಯುವತಿ: ಮಾರ್ಚ್ ಆರಂಭದಲ್ಲಿ ಇದೇ ಯುವತಿ ಲಾಡ್ಜ್ ಮಾಲೀಕರೊಂದಿಗೆ ಜಗಳ ಮಾಡಿಕೊಂಡು ಚನ್ನಮ್ಮ ವೃತ್ತದಲ್ಲಿ ಬಂದು ಪೊಲೀಸರ ಎದುರು ಕಣ್ಣೀರಿಟ್ಟಿದ್ದಳು. ವಿದೇಶಿ ಮಹಿಳೆಯಾದ್ದರಿಂದ ಲಾಡ್ಜ್ ಮಾಲೀಕರು ಹೊರಗೆ ಹಾಕಿದ್ದರು. ಆಕೆ ಮುಂಡಗೋಡ ಟಿಬೆಟಿಯನ್ ಶಿಬಿರದ ಸ್ನೇಹಿತನೊಂದಿಗೆ ದಿಕ್ಕು ತೋಚದೇ ಚನ್ನಮ್ಮ ವೃತ್ತದಲ್ಲಿ ಬಂದು ಕುಳಿತಿದ್ದಳು. ಆಕೆಯ ಸಮಸ್ಯೆ ಆಲಿಸಿದ್ದ ಉಪ ನಗರ ಠಾಣೆ ಪೊಲೀಸರು ಹಳೇ ಬಸ್ ನಿಲ್ದಾಣದ ಎದುರಿನ ರೇಣುಕಾ ಲಾಡ್ಜ್​ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ಲಾಡ್ಜ್ ಮಾಲೀಕ ಈವರೆಗೆ ವಸತಿ ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

3 ತಿಂಗಳು ಒಂಟಿ ಜೀವನ: ಮೈಶಿಯಾನ್ ಸತತ ಮೂರು ತಿಂಗಳ ಕಾಲ ಒಂಟಿ ಜೀವನ ಮತ್ತು ನರಕಯಾತನೆ ಅನುಭವಿಸಿದ್ದಾಳೆ. ಹಣವೂ ಇಲ್ಲದೇ ಊಟಕ್ಕೂ ಸಮಸ್ಯೆ ಅನುಭವಿಸಿದ್ದಾಳೆ. ಹೀಗಿದ್ದರೂ ಕರೊನಾ ಪರಿಹಾರ ನಿಧಿಗೆ 5 ಸಾವಿರ ರೂ. ದೇಣಿಗೆ ನೀಡಿದ್ದಳು. ಆಕೆ ಹಣ್ಣು- ಹಂಪಲು ತಿಂದೇ ದಿನ ಕಳೆಯುತ್ತಿದ್ದಳು ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net