ಅಪರಾಧ ತಡೆಗೆ ಜಂಟಿ ಕೈ ಸಮಿತಿ ರಚನೆ

01 hnl
Published on

ಹೊನ್ನಾಳಿ: ಸಾರ್ವಜನಿಕರ ಸಹಕಾರದೊಂದಿಗೆ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ಆಶಯ ದೊಂದಿಗೆ ಜಿಲ್ಲಾ ಪೊಲೀಸ್ ಇಲಾಖೆ, ಸಾರ್ವಜನಿಕರು-ಪೊಲೀಸರನ್ನು ಒಳಗೊಂಡು ಆಯಾ ತಾಲೂಕುವಾರು ಜಂಟಿ ಕೈಗಳು ಎಂಬ ವಿನೂತನ ಸಮಿತಿ ರಚಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.

ಹೊನ್ನಾಳಿಯಲ್ಲಿ ನವೀಕೃತ ಪೊಲೀಸ್ ಠಾಣೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರು ಹಾಗೂ ಪೊಲೀಸರು ಒಟ್ಟಾಗಿ ಸೇರಿ ಎಂತಹ ಅಪರಾಧಗಳನ್ನಾದರೂ ತಡೆಯಬಹುದು. ಅದಕ್ಕಾಗಿಯೇ ಜಂಟಿ ಕೈಗಳು ಎಂಬ ವಿನೂತನ ಸಮಿತಿ ರಚಿಸಲಾಗಿದೆ ಎಂದರು.

ಈಗಾಗಲೇ ಹೊನ್ನಾಳಿಯಲ್ಲಿ 31 ಜನ ನೋಂದಣಿ ಮಾಡಿಕೊಂಡಿದ್ದಾರೆ. ಅವರೆಲ್ಲ ರಾತ್ರಿ ಬೀಟ್, ಟ್ರಾಫಿಕ್ ಇನ್ನಿತರ ಕರ್ತವ್ಯ ನಿರ್ವಹಣೆಯಲ್ಲಿ ಪೊಲೀಸರಿಗೆ ಸಹಕಾರ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಪೊಲೀಸರು ಜನರ ಕಣ್ಣೀರೊರೆಸುವ ಕೆಲಸ ಮಾಡುತ್ತಾರೆ. ಅವರ ಬಗ್ಗೆ ಸಾರ್ವಜನಿಕರಿಗೆ ನಕಾರಾತ್ಮಕ ಭಾವನೆ ಬೇಡ. ಒಬ್ಬ ಸಿಬ್ಬಂದಿ ತಪ್ಪು ಮಾಡಿದರೆ ಅಥವಾ ಒರಟಾಗಿ ನಡೆದು ಕೊಂಡರೆ ಎಲ್ಲ ಪೊಲೀಸರು ಹಾಗೆಯೇ ಇರುತ್ತಾರೆ ಎಂಬ ನಿಲುವು ಸರಿಯಲ್ಲ ಎಂದರು.

ಪೊಲೀಸರು ಚೈತನ್ಯದ ಚಿಲುಮೆಯಾಗಿ ಕರ್ತವ್ಯ ನಿರ್ವಹಿಸಲು ಠಾಣೆಯ ವಾತಾವರಣವೂ ಸುಂದರವಾಗಿರಬೇಕು. ಹೊನ್ನಾಳಿಯ ನವೀಕೃತ ಹೈಟೆಕ್ ಠಾಣೆಯಲ್ಲಿ ಅಂತಹ ವಾತಾವರಣ ಇದ್ದು ಈ ಠಾಣೆ ಇಡೀ ಜಿಲ್ಲೆಗೆ ಮಾದರಿಯಾಗಿದೆ.

ಪಿಐ ಸುನಿಲ್ ಕುಮಾರ್ ಮಾದರಿಯಲ್ಲಿ ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳು ಕಟ್ಟಡ ನಿರ್ವಣಕ್ಕೆ ಮುಂದಾದರೆ ಅವರಿಗೂ ಇಲಾಖೆಯಿಂದ ಅನುದಾನ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಪೊಲೀಸರು ಇಲಾಖೆಗೆ ನಿಷ್ಠೆ ಪ್ರದರ್ಶಿಸುತ್ತಾರೆ. ಎಂಥದ್ದೇ ತನಿಖೆ ನಡೆಯುತ್ತಿದ್ದರೂ ಅದರ ಒಂದು ಎಳೆಯನ್ನು ಸಾರ್ವಜನಿಕರಿಗಾಗಲಿ ಅಥವಾ ರಾಜಕಾರಣಿಗಾಗಲಿ ಬಿಟ್ಟುಕೊಡುವುದಿಲ್ಲ, ಗುಟ್ಟೇ ಅವರ ಧರ್ಮ ಎಂದು ಹೇಳಿದರು.

ನ್ಯಾಮತಿ ದರೋಡೆ ಪ್ರಕರಣವನ್ನು ಭೇದಿಸಿ, ಆರೋಪಿಗಳ ಸಹಿತ ಕೋಟ್ಯಂತರ ರೂ. ಬೆಲೆ ಬಾಳುವ ಚಿನ್ನಾಭರಣ ವಶಕ್ಕೆ ಪಡೆದ ನ್ಯಾಮತಿ ಪೊಲೀಸರನ್ನು ಇದೇ ವೇಳೆ ಶಾಸಕರು ಅಭಿನಂದಿಸಿದರು.

ಎಎಸ್ಪಿ ಸ್ಯಾಮ್ ವರ್ಗೀಸ್ ಮಾತನಾಡಿದರು. ದಾವಣಗೆರೆ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಸಂತೋಷ್, ಜಿ. ಮಂಜುನಾಥ್, ನ್ಯಾಮತಿ ಪಿಐ ರವಿಕುಮಾರ್, ಸಂತೇಬೆನ್ನೂರು ಪಿಐ ಲಿಂಗನಗೌಡ, ಹೊನ್ನಾಳಿ ಪಿಐ ಸುನಿಲ್ ಕುಮಾರ್, ಪಿಎಎಸ್​ಐ ಕುಮಾರ್, ಎಎಸ್​ಐ ಹರೀಶ್ ಹಾಗೂ ಇನ್ನಿತರ ಪೊಲೀಸ್ ಸಿಬ್ಬಂದಿ ಇದ್ದರು.

ಸಿಸಿ ಕ್ಯಾಮರಾ ಮನೆ ಕಾವಲಗಾರನಿದ್ದಂತೆ: ಇತ್ತೀಚೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಸಾಕಷ್ಟು ವೆಚ್ಚಮಾಡಿ ದೊಡ್ಡ, ದೊಡ್ಡ ಮನೆಗಳನ್ನು ನಿರ್ವಿುಸಲಾಗುತ್ತಿದೆ. ಆದರೆ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳುವುದಿಲ್ಲ. ಸಿಸಿ ಕ್ಯಾಮರಾ ಮನೆಯ ಕಾವಲುಗಾರನಿದ್ದಂತೆ. ಎಲ್ಲರೂ ವಾಣಿಜ್ಯ ಮಳಿಗೆಗಳು ಹಾಗೂ ಮನೆಗಳ ಬಳಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಎಸ್ಪಿ ಉಮಾ ಪ್ರಶಾಂತ್ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net