ಪರಿಸರ ಸ್ವಚ್ಛತೆ ನಮ್ಮೆಲ್ಲರ ಕರ್ತವ್ಯ

SWACHCHATE
Published on

ಚಿಕ್ಕಮಗಳೂರು: ಅತ್ಯಂತ ಸೂಕ್ಷ್ಮವಾದ ಪಶ್ಚಿಮಘಟ್ಟದಚಂದ್ರದ್ರೋಣ ಪರ್ವತ ಶ್ರೇಣಿ ಬಹುಮುಖ್ಯವಾದದ್ದು. ಸಾಕಷ್ಟು ಪ್ರವಾಸಿಗರು ಈ ತಾಣಗಳಲ್ಲಿ ಮೋಜು ಮಾಡುತ್ತಿರುವುದರಿಂದ ದಿನೇದಿನೆ ಇಲ್ಲಿ ತ್ಯಾಜ್ಯ ಹೆಚ್ಚಾಗುತ್ತಿದೆ. ಹಾಗಾಗಿ ಗಿರಿಶ್ರೇಣಿಯ ತಾಣಗಳನ್ನು ಶುಚಿಯಾಗಿಡಲು ಮತ್ತು ಅರಿವು ಮೂಡಿಸಲು ಜಿಲ್ಲಾಡಳಿತ ಭಾನುವಾರ ಗಿರಿ ಸ್ವಚ್ಛತಾ ದಿನದ ಮೂಲಕ ಮುನ್ನುಡಿ ಬರೆಯಿತು.

ನಗರದ ಟೌನ್ ಕ್ಯಾಂಟೀನ್ ಮುಂಭಾಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ಹಸಿರು ನಿಶಾನೆ ತೋರುವ ಮೂಲಕ ಗಿರಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ನೈಸರ್ಗಿಕವಾಗಿ ಅತ್ಯಂತ ಸುಂದರವಾದ ಜಿಲ್ಲೆ. ಹಲವು ಪ್ರವಾಸಿ ತಾಣಗಳು ಹಾಗೂ ಅತ್ಯದ್ಭುತ ಗಿರಿಶ್ರೇಣಿಗಳನ್ನು ಒಳಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರಿಂದ ಕಸದ ತೊಟ್ಟಿಯಾಗಿದೆ. ಇದನ್ನು ಸ್ವಚ್ಛಗೊಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಗಿರಿ ಶ್ರೇಣಿ ಸ್ವಚ್ಛತಾ ಕಾರ್ಯಕ್ರಮದ ಮೂಲಕ ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಹಿರಿಯರು ನಮಗೆ ನೀಡಿರುವ ನೈಸರ್ಗಿಕ ಆಸ್ತಿಯ ಸೌಂದರ್ಯವನ್ನು ನಾವು ಅನುಭವಿಸುತ್ತಿದ್ದೇವೆ. ಸ್ವಚ್ಛತೆ ಕಾಪಾಡುವ ಮೂಲಕ ಮುಂದಿನ ಪೀಳಿಗೆಗೆ ಮಾದರಿಯಾಗಬೇಕಿದೆ ಎಂದು ಹೇಳಿದರು.

ಪೌರಾಯುಕ್ತ ಎಂ.ಸಿ.ಬಸವರಾಜ್ ಮಾತನಾಡಿ, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕುವುದರಿಂದ ಪ್ರಕೃತಿ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಸ್ವಚ್ಛತೆ ಕಾಪಾಡುವುದು ಪ್ರವಾಸಿಗರ ಕರ್ತವ್ಯ ಎಂದು ಹೇಳಿದರು.

ನಗರಸಭೆ, ಹೋಂ ಗಾರ್ಡ್ಸ್, ಪೊಲೀಸ್, ಅರಣ್ಯ, ಪ್ರವಾಸೋದ್ಯಮ ಇಲಾಖೆಗಳು, ಸ್ಕೌಟ್ಸ್ ಆಂಡ್ ಗೈಡ್ಸ್, ಎನ್​ಸಿಸಿ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪನ್ವಾರ್, ಉಪ ಅರಣ್ಯಾಧಿಕಾರಿ ಜಗನ್ನಾಥ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಶಿರೋಳ್ಕರ್, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net