

ಕೆ.ಆರ್.ಸಾಗರ: ಬೆಳಗೊಳ ಗ್ರಾಮದ ಬಳಿ ಇರುವ ಪ್ರಸಿದ್ಧ ಬಲಮುರಿ ಪ್ರವಾಸಿ ತಾಣದ ಕಾವೇರಿ ನದಿಯಲ್ಲಿ ಈಜಲು ಹೋಗಿ ಆಕಸ್ಮಿಕವಾಗಿ ಸಾವಿಗೀಡಾಗುತ್ತಿರುವ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದರು.
ಪ್ರವಾಸಿಗರು ನದಿಯಲ್ಲಿ ಮುಳಗಿ ಸಾವಿಗೀಡಾದ ಜಾಗಗಳು ಮತ್ತು ಅಪಾಯಕಾರಿ ಸ್ಥಳಗಳನ್ನು ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕಾವೇರಿ ನೀರಾವರಿ ನಿಗಮದ ಸಹಾಯಕ ಇಂಜಿನಿಯರ್ ಸುರೇಶ್ ಬಾಬು ಅವರಿಂದ ಬಲಮುರಿ ಪ್ರವಾಸಿ ತಾಣದ ನದಿಪಾತ್ರ ಸ್ಥಳದ ಸಂಪೂರ್ಣ ಮಾಹಿತಿ ಪಡೆದರು.
ಬಲಮುರಿ ಮತ್ತು ಎಡಮುರಿ ತಾಣದ ವಿವರ, ನದಿಗೆ ಅಡ್ಡಲಾಗಿ ಕಟ್ಟಿರುವ ಕಟ್ಟೆ ಮೇಲೆ ಸಂಚಾರ ನಿಷೇಧ ಹಾಗೂ ಹಿನ್ನೀರಿನಲ್ಲಿ ಅಪಾಯದ ಸ್ಥಳಗಳಲ್ಲ್ಲಿ ನೀರಿಗೆ ಇಳಿಯದಂತೆ ಕಾವೇರಿ ನೀರಾವರಿ ನಿಗಮದ ವತಿಯಿಂದ ನಾಮಫಲಕ ಅಳವಡಿಸಲಾಗಿದೆ. ಆದರೂ ಪ್ರವಾಸಿಗರು ನೀರಿಗೆ ಇಳಿಯುತ್ತಿದ್ದಾರೆ. ಇದನ್ನು ನಿಯಂತ್ರಿಸಿದರೆ ಆಕಸ್ಮಿಕ ಸಾವುಗಳನ್ನು ತಪ್ಪಿಸಬಹುದು ಎಂದು ನಿಗಮ ಎಇ ಸುರೇಶ್ ಬಾಬು ಎಸ್ಪಿ ಅವರಿಗೆ ಮಾಹಿತಿ ನೀಡಿದರು.
ನಂತರ ಗ್ರಾಮದ ಮುಖಂಡರಾದ ಶ್ರೀನಿವಾಸೇಗೌಡ, ತಾಪಂ ಮಾಜಿ ಅಧ್ಯಕ್ಷ ಸೋಮಣ್ಣ, ಗ್ರಾ.ಪಂ ಮಾಜಿ ಸದಸ್ಯ ರವಿ ಹಾಗೂ ಸ್ಥಳೀಯ ಗ್ರಾಮಸ್ಥರ ಜತೆ ಚರ್ಚಿಸಿದರು.
ಇಲ್ಲಿನ ಪಾರ್ಕಿಂಗ್ ಹಾಗೂ ದೋಣಿ ವಿಹಾರ ನಡೆಸುತ್ತಿರುವ ಬಲಮುರಿ ಅಭಿವೃದ್ಧಿ ಸಮಿತಿ ಪ್ರವಾಸಿಗರ ರಕ್ಷಣೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು. ಅಲ್ಲದೆ ಇಲ್ಲಿನ ದೋಣಿ ವಿಹಾರ ಕೇಂದ್ರದ ಜನರನ್ನು ದೋಣಿಗೆ ಹತ್ತಿಸುವ ಸ್ಥಳ ಬದಲಾವಣೆ ಮಾಡುವಂತೆ ಹಾಗೂ ಎಚ್ಚರಿಕೆ ನಾಮಫಲಕಗಳನ್ನು ಹೆಚ್ಚಾಗಿ ಅಳವಡಿಸುವಂತೆ ನಿರ್ದೇಶನ ನೀಡಿದರು. ಇಲ್ಲಿನ ಕಟ್ಟೆ ಎರಡೂ ಬದಿ ಫೆನ್ಸಿಂಗ್ ಅಳವಡಿಸುವಂತೆ ತಿಳಿಸಿದರು. ಇಲ್ಲಿಗೆ ಬರುವ ಪ್ರವಾಸಿಗರು ನೀರಿನಲ್ಲಿ ಇಳಿಯದಂತೆ ಸೂಚನೆ ನೀಡಲು ತಿಳಿಸಿದರು.
ಡಿವೈಎಸ್ಪಿ ಶಾಂತಮಲ್ಲಪ್ಪ, ಕೆ.ಆರ್.ಸಾಗರ-ಅರಕೆರೆ ಠಾಣೆ ವೃತ್ತ ನಿರೀಕ್ಷಕ ವಿವೇಕಾನಂದ, ಕೆ.ಆರ್.ಸಾಗರ ಪೊಲೀಸ್ ಠಾಣೆ ತನಿಖಾ ವಿಭಾಗದ ಪಿಎಸೈ ಲಮಾಣಿ ಸುಶ್ಮಾ, ಬೆಳಗೊಳ ಗ್ರಾಪಂ ಪ್ರಭಾರ ಪಿಡಿಒ ವೆಂಕಟರಾಮು, ಗ್ರಾಮದ ಹಿರಿಯ ಮುಖಂಡರಾದ ಶ್ರೀನಿವಾಸೇಗೌಡ, ತಾಪಂ ಮಾಜಿ ಅಧ್ಯಕ್ಷ ಸೋಮಣ್ಣ, ಗ್ರಾಪಂ ಮಾಜಿ ಸದಸ್ಯ ರವಿ ಇತರರು ಇದ್ದರು.