ಲಾಕ್‌ಡೌನ್ ಉಲ್ಲಂಘಿಸಿದವರಿಗೆ ಜೈಲು ಶಿಕ್ಷೆ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಎಚ್ಚರಿಕೆ

IMG-20200415-WA0086
Published on

ತುಮಕೂರು: ಕರೊನಾ ಮಹಾಮಾರಿ ಅಟ್ಟಹಾಸ ಹಿನ್ನೆಲೆಯಲ್ಲಿ ಲಾಕ್‌ಡೌನ್ 2.0ನಲ್ಲಿ ಪೊಲೀಸ್ ಇಲಾಖೆ ಇನ್ನಷ್ಟು ಕಠಿಣಕ್ರಮಕ್ಕೆ ಮುಂದಾಗಿದೆ. ಅನವಶ್ಯಕವಾಗಿ ಲಾಕ್‌ಡೌನ್ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಎಚ್ಚರಿಕೆ ನೀಡಿದ್ದಾರೆ.

ಏ.14ಕ್ಕೆ ಮೊದಲ ಹಂತದ ಲಾಕ್‌ಡೌನ್ ಮುಗಿದಿದ್ದು, 2ನೇ ಹಂತದ ಲಾಕ್‌ಡೌನ್ ಬುಧವಾರ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಿನಿಂದಲೇ ಪೊಲೀಸರು ನಗರದ ಪ್ರಮುಖ ಪಾಯಿಂಟ್‌ಗಳಲ್ಲಿ ರಸ್ತೆಗಿಳಿದು ಅನವಶ್ಯಕವಾಗಿ ಗಾಡಿಗಳಲ್ಲಿ ತಿರುಗವರಿಗೆ ಬುದ್ಧಿ ಹೇಳಿದ್ದಲ್ಲದೆ ಕೈಮುಗಿದು ಮನೆಯಲ್ಲೇ ಇರುವಂತೆ ಮನವಿ ಕೂಡ ಮಾಡಿದ್ದಾರೆ.

ಬೆಳಗಿನಿಂದ ರಸ್ತೆಗಳಲ್ಲಿ ಓಡಾಟ ದಟ್ಟಣೆ ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ರಸ್ತೆಗಿಳಿದು ಅನಾವಶ್ಯಕವಾಗಿ ಓಡಾಡುವರಿಗೆ ಮನೆಯಲ್ಲೇ ಇರಿ, ಅಗತ್ಯವಸ್ತುಗಳೆಲ್ಲ ಮನೆಬಾಗಿಲಲ್ಲೇ ಸಿಗುತ್ತವೆ. ದಿನಸಿಪದಾರ್ಥಗಳನ್ನು ಮನೆ ಹತ್ತಿರದ ಅಂಗಡಿಗಳಿಗೆ ನಡೆದುಕೊಂಡೆ ಹೋಗಿ ಖರೀದಿಸುವಂತೆ ತಿಳಿಹೇಳಿದ್ದಾರೆ.

ಮೊದಲ ಹಂತದಲ್ಲಿ ಅನಾವಶ್ಯಕವಾಗಿ ಓಡಾಡುವ 2500 ಗಾಡಿಗಳನ್ನು ಜಪ್ತಿ ಮಾಡಲಾಗಿದೆ. ಇನ್ಮುಂದೆ ಸುಖಾಸುಮ್ಮನೆ ತಿರುಗಾಡುವರ ವಿರುದ್ಧ ಇನ್ನಷ್ಟು ಕಠಿಣಕ್ರಮ ಜರುಗಳಿಸಲಾಗುವುದು. ಇತ್ತೀಚೆಗೆ ಲಾಕ್‌ಡೌನ್ ಉಲ್ಲಂಘಿಸಿದ 150 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ಮುಂದೆ ಇದೇ ರೀತಿ ಮುಂದುವರಿದಿದ್ದೇ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಕಳುಹಿಸಲಾಗುವುದು ಎಂದು ಡಾ.ವಂಶಿಕೃಷ್ಣ ಎಚ್ಚರಿಸಿದ್ದಾರೆ. ಜಿಲ್ಲೆಯಲ್ಲಿ ಕರೊನಾ ವಿರುದ್ಧದ ಸಮರದಲ್ಲಿ ಮುಂಜಾಗ್ರತಾ ಕ್ರಮವಾಗಿ ಉತ್ತಮ ಹೆಜ್ಜೆ ಇಡಲಾಗಿದೆ. ಹೊರ ರಾಜ್ಯಗಳು, ಹಾಟ್‌ಸ್ಪಾಟ್ ಜಿಲ್ಲೆಗಳಿಂದ ಬರುವ ವ್ಯಕ್ತಿಗಳ ಬಗ್ಗೆಯೂ ನಮಗೆ ಮಾಹಿತಿ ನೀಡುವಂತೆ ಸಹ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಬೈಕ್‌ಗಳಲ್ಲಿ ಇಬ್ಬರು ಓಡಾಡುವಂತಿಲ್ಲ: ಕರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ದ್ವಿಚಕ್ರವಾಹನಗಳಲ್ಲಿ ಇಬ್ಬರು ಓಡಾಡುವಂತಿಲ್ಲ. ಏನಾದರೂ ಕೆಲಸವಿದ್ದರೇ ಒಬ್ಬರೇ ಓಡಾಡಬೇಕು. ಯಾವುದೇ ಕಾರಣಕ್ಕೂ ಹಿಂಬದಿ ಸವಾರಾರ ಕರೆದುಕೊಂಡು ಹೋಗುವಂತಿಲ್ಲ ಎಂದು ಎಸ್ಪಿ ಡಾ.ಕೆ.ವಂಶಿಕೃಷ್ಣ ಎಚ್ಚರಿಕೆ ನೀಡಿದರು.

ಇಂದಿರಾಕ್ಯಾಂಟೀನ್ ಖಾಲಿ ಖಾಲಿ: ಲಾಕ್‌ಡೌನ್ ಜಾರಿ ಹಿನ್ನೆಲೆಯಲ್ಲಿ ನಗರದ 4 ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಪಹಾರ ಹಾಗೂ ಊಟಕ್ಕೆ ಬರುವರ ಸಂಖ್ಯೆ ಇಳಿದಿದೆ. ರೈಲು ನಿಲ್ದಾಣದ ರಸ್ತೆ, ಶಿರಾಗೇಟ್, ಜೆ.ಸಿ.ರಸ್ತೆ, ಕ್ಯಾತಸಂದ್ರದಲ್ಲಿ ಇಂದಿರಾ ಕ್ಯಾಂಟೀನ್‌ಗಳಿದ್ದು, ಪ್ರತೀ ಕ್ಯಾಂಟೀನ್‌ನಲ್ಲಿ ಸರಾಸರಿ 20 ರಿಂದ 30 ಮಾತ್ರ ಊಟ ವಿತರಣೆಗೊಳ್ಳುತ್ತಿದೆ. ಮಧ್ಯಾಹ್ನ ಹಾಗೂ ರಾತ್ರಿ ಎರಡೊತ್ತು ಸೇರಿ 80 ರಿಂದ 120 ರಷ್ಟು ಮಾತ್ರ ಊಟ ವಿತರಣೆ ಆಗುತ್ತಿದೆ. ಜತೆಗೆ ಉಚಿತವಾಗಿ ಆಹಾರ ವಿತರಣೆ ಮಾಡುವ ಸಂಘಟನೆಗಳ ಸಂಖ್ಯೆ ಹೆಚ್ಚಿದ್ದು ಇಂದಿರಾಕ್ಯಾಂಟೀನ್‌ಗಳಲ್ಲಿ ಬೇಡಿಕೆ ಕ್ಷೀಣಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net