

ತುಮಕೂರು : ಮಣ್ಣು ದಂಧೆಕೋರರ ವಿರುದ್ಧ ಎಸ್ಸಿ-ಎಸ್ಟಿ ಕಾಯ್ದೆ ಅಡಿ ದೂರು ದಾಖಲಿಸಲು ನಿರ್ಲಕ್ಷೃ ವಹಿಸಿದ್ದ ಪೊಲೀಸರ ವಿರುದ್ಧವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ಫೆ.6ರಂದು ಕದರನಹಳ್ಳಿ-ಜನಪನಹಳ್ಳಿ ತಾಂಡಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಮಣ್ಣು ಸಾಗಣೆ ತಡೆಯಲು ಯತ್ನಿಸಿದ್ದ ಹೈಕೋರ್ಟ್ ವಕೀಲ ಎಲ್.ರಮೇಶ್ ನಾಯಕ್‌ಗೆ ದಂಧೆಕೋರರು ತಾಂಡಾವನ್ನೇ ಎತ್ತಿಸಿ, ಸುಟ್ಟುಹಾಕುವುದಾಗಿ ಬೆದರಿಕೆ ಒಡ್ಡಲಾಗಿತ್ತು. ಈ ಸಂಬಂಧ ಕ್ಯಾತಸಂದ್ರ ಠಾಣೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗೃಹಸಚಿವರಿಗೂ ದೂರ ನೀಡಲಾಗಿತ್ತು. ಇಷ್ಟಾದರೂ ಪರಿಶಿಷ್ಟ ಜಾತಿ-ಪಂಗಡ ದೌರ್ಜನ್ಯ ಕಾಯ್ದೆ ಅಡಿ ಎಫ್‌ಐಆರ್ ದಾಖಲಿಸಲು ಪೊಲೀಸರು ನಿರ್ಲಕ್ಷೃವಹಿಸಿದ್ದರು. ಈ ಹಿನ್ನೆಲೆಯಲ್ಲಿ ಎಲ್.ರಮೇಶ್ ನಾಯಕ್ ಖಾಸಗಿ ದೂರಿನ ಮೂಲಕ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮೆಟ್ಟಿಲೇರಿದ್ದರು. ದೂರು ದಾಖಲಿಸಿ, ತನಿಖೆ ನಡೆಸಲು ನ್ಯಾಯಾಲಯ ಆದೇಶಿಸಿತ್ತು.
ನ್ಯಾಯಾಲಯ ಆದೇಶವಿದ್ದರೂ ಎಫ್‌ಐಆರ್ ದಾಖಲಿಸಲು ಪೊಲೀಸರು ವಿಳಂಬ, ನಿರ್ಲಕ್ಷೃ, ಕರ್ತವ್ಯಲೋಪ ಎಸಗಿದ್ದರು. ಹಾಗಾಗಿ, ರಮೇಶ್ ನಾಯಕ್ ಮತ್ತೆ ಸೋಮವಾರ ನ್ಯಾಯಾಲಯದ ಬಾಗಿಲು ತಟ್ಟಿದ್ದು ಈ ಸಂಬಂಧ ವಾದ ಆಲಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಜಿ.ರಾಘವೇಂದ್ರಗೌಡ ಅವರು ಕ್ಯಾತಸಂದ್ರ ಪಿಎಸ್ಸೈ ಓಂಪಕ್ರಾಶ್ ಗೌಡ ಹಾಗೂ ಎಸ್ಪಿ ರಾಹುಲ್ ಕುಮಾರ್ ಶಹಾಪೂರವಾಡ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡು ನೊಟೀಸ್ ಜಾರಿ ಮಾಡಿದೆ.
ಮಣ್ಣು ದಂಧೆ ತಡೆಯಲು ಯತ್ನಿಸಿದಾಗ ನಮ್ಮ ತಾಂಡ್ಯವನ್ನೇ ಎತ್ತಿಸಿ, ಸುಟ್ಟುಹಾಕುವುದಾಗಿ ದಂಧೆಕೋರರು ಜೀವಬೆದರಿಕೆ ಒಡ್ಡಿದ್ದರು. ಈ ಸಂಬಂಧ ಕ್ಯಾತಸಂದ್ರ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಗಂಭೀರ ಪ್ರಕರಣ ದಾಖಲಿಸದೆ ಬೆದರಿಕೆ ಪ್ರಕರಣ ದಾಖಲಿಸಿಕೊಂಡು ಕೈತೊಳೆದುಕೊಂಡಿದ್ದರು. ಹಾಗಾಗಿ, ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆ ಅಡಿ ದೂರು ದಾಖಲಿಸಲು ಕೋರ್ಟ್ ಮೊರೆ ಹೋಗಲಾಗಿತ್ತು. ಅದರಂತೆ ನ್ಯಾಯಾಲಯ ದೂರು ದಾಖಲಿಸಿ, ಎಸ್ಪಿಗೆ ನೊಟೀಸ್ ಜಾರಿ ಮಾಡಿದೆ. ಎಲ್.ರಮೇಶ್ ನಾಯಕ್, ಹೈಕೋರ್ಟ್ ವಕೀಲ