ಹೈಕೋರ್ಟ್ ಆದೇಶ ಪಾಲಿಸದಿದ್ದರೆ ಕ್ರಮ ; ಕಾಲೇಜು ಆಡಳಿತ ಮಂಡಳಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಎಚ್ಚರಿಕೆ

15TMK_SP_OFFICE
Published on

ತುಮಕೂರು : ಹಿಜಾಬ್-ಕೇಸರಿಶಾಲು ವಿವಾದದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರಜೆ ಘೋಷಿಸಲಾಗಿದ್ದ ಪದವಿ, ಪಿಯು, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜು ಬುಧವಾರ ಪುನರಾರಂಭವಾಗಲಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್‌ಕುಮಾರ್, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ನೇತೃತ್ವದಲ್ಲಿ ಮಂಗಳವಾರ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜತೆ ಆನ್‌ಲೈನ್ ಮೂಲಕ ಸಭೆ ನಡೆಸಲಾಯಿತು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಹಿಜಾಬ್-ಕೇಸರಿಶಾಲು ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಧ್ಯಂತರ ಆದೇಶವನ್ನು ಪಾಲಿಸದ ಕಾಲೇಜು ಆಡಳಿತ ಮಂಡಳಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅನುದಾನಿತ, ಅನುದಾನರಹಿತ ಹಾಗೂ ಸರ್ಕಾರಿ ಕಾಲೇಜುಗಳು ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಆದೇಶವನ್ನು ಪಾಲಿಸುವಲ್ಲಿ ಆಯಾ ಕಾಲೇಜಿನ ಪ್ರಾಚಾರ್ಯರು, ಆಡಳಿತ ಮಂಡಳಿಗಳೇ ಸಂಪೂರ್ಣ ಜವಾಬ್ದಾರಿಯಾಗಿರುತ್ತಾರೆ ಎಂದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕಾಲೇಜಿನ ಸುತ್ತಮುತ್ತ 200 ಮೀ. ವ್ಯಾಪ್ತಿ ಪ್ರದೇಶದಲ್ಲಿ ಇಂದಿನಿಂದ ಮುಂದಿನ ಆದೇಶದವರೆಗೂ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಿಷೇಧಾಜ್ಞೆ ಉಲ್ಲಂಘನೆಯಾದಲ್ಲಿ ಕಾಲೇಜಿನ ಮುಖ್ಯಸ್ಥರು ಸಂಬಂಧಿಸಿದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು, ವಿದ್ಯಾರ್ಥಿಗಳು, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗವನ್ನು ಹೊರತುಪಡಿಸಿ ಯಾವುದೇ ಪೋಷಕ, ಪಾಲಕರಿಗೆ ನಿಷೇಧಿತ ಪ್ರದೇಶದೊಳಗೆ ಪ್ರವೇಶಕ್ಕೆ ಅವಕಾಶವಿಲ್ಲ ಎಂದರು.

ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮೀಪಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಶಾಂತಿ ಕಾಪಾಡುವುದು ಅತ್ಯಾವಶ್ಯಕವಿರುತ್ತದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಸಾರ್ವಜನಿಕರು ಸಹಕರಿಸಬೇಕು ಎಂದು ಸಲಹೆ ನೀಡಿದರು.

ನಿಷೇಧಾಜ್ಞೆ ಅವಧಿಯಲ್ಲಿ ಕೆಲವು ಅವಶ್ಯಕ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಪಾಲಕರು, ಪೋಷಕರು, ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯ ಅನುಮತಿ ಪಡೆದು ಶಾಲೆಯ ಒಳಗೆ ಪ್ರವೇಶಿಸಲು ಅನುಮತಿ ನೀಡಲು ಅವಕಾಶವಿದೆ ಎಂದು ಡಿಸಿ ತಿಳಿಸಿದರು. ನಿಷೇಧಿತ ಪ್ರದೇಶದಲ್ಲಿರುವ ಎಲ್ಲ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೆ, ಸದರಿ ಅಂಗಡಿಗಳಲ್ಲಿ ಹೆಚ್ಚಿನ ಜನ ಗುಂಪು ಗೂಡುವುದನ್ನು ನಿಷೇಧಿಸಲಾಗಿದೆ. ಯಾವುದೇ ಮತೀಯ ಭಾವನೆಗಳಿಗೆ ಭಂಗ ತರುವಂತಹ ಚಟುವಟಿಕೆ ನಡೆದಲ್ಲಿ ಸಂಬಂಧಪಟ್ಟ ಅಂಗಡಿ ಮಾಲೀಕರ ಮೇಲೆ ಕಾನೂನು ರೀತ್ಯಾ ಕ್ರಮವಹಿಸಲಾಗುವುದು ಎಂದರು. ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಇದ್ದರು.

ಕಾಲೇಜು ಆಡಳಿತ ಮಂಡಳಿಗಳು ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಪೊಲೀಸ್ ಠಾಣೆಯೊಂದಿಗೆ ಸಂಪರ್ಕ ಹೊಂದಿರಬೇಕು. ಯಾವುದೇ 3ನೇ ವ್ಯಕ್ತಿಯಿಂದ ದೂರುಗಳು ಬರುವ ಮುಂಚೆ ಪೊಲೀಸರಿಗೆ ನೀವೆ ಮಾಹಿತಿ ನೀಡಿರಬೇಕು. ರಾಹುಲ್‌ಕುಮಾರ್ ಜಿಲ್ಲಾ ಪೊಲೀಸ್ ಅಧೀಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net