

ಬೈಲಹೊಂಗಲ: ತಾಲೂಕಾದ್ಯಂತ ಕಳೆದ ಮೂರ‌್ನಾಲ್ಕು ದಿನಗಳಿಂದ ಮುಂಗಾರು ಮಳೆಯಾಗಿದ್ದರಿಂದ ಸೋಯಾಬೀನ್ ಬಿತ್ತನೆಗೆ ಮುಂದಾಗಿರುವ ರೈತರು, ಬೀಜ ವಿತರಣಾ ಕೇಂದ್ರಗಳಲ್ಲಿ ಸರ್ಕಾರಿ ನಿಯಮ ಗಾಳಿಗೆ ತೂರಿ, ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಯ್ದುಕೊಳ್ಳದೇ ಮುಗಿಬೀಳುತ್ತಿದ್ದಾರೆ.
ಬೈಲಹೊಂಗಲ, ಚನ್ನಮ್ಮ ಕಿತ್ತೂರು ತಾಲೂಕುಗಳ 29 ಬೀಜ ವಿತರಣಾ ಕೇಂದ್ರಗಳಲ್ಲಿ ನೂರಾರು ರೈತರು ಪರ್ಮಿಟ್ ಪಡೆದು ಬೀಜ ಪಡೆಯಲು ಆಗಮಿಸಿದ್ದರು. ಗುರುವಾರ ಕೆಲ ಪ್ರದೇಶದಲ್ಲಿ ಬೀಜದ ಕೊರತೆ ಕೂಡ ಆಗಿದ್ದರಿಂದ ಜನದಟ್ಟಣೆ ಉಂಟಾಯಿತು.
ಬೈಲಹೊಂಗಲ ಪಟ್ಟಣದ ಎಪಿಎಂಸಿ ಆವರಣದ ಬೀಜ ವಿತರಣಾ ಕೇಂದ್ರ, ಬೆಳವಡಿ, ನೇಸರಗಿ ಕೇಂದ್ರಗಳನ್ನೊಳಗೊಂಡು ತಾಲೂಕಿನ ಅನೇಕ ವಿತರಣಾ ಕೇಂದ್ರಗಳಲ್ಲಿ ಬೀಜದ ಕೊರತೆಯಾಗಿದ್ದರಿಂದ ದೂರದ ಗ್ರಾಮಗಳಿಂದ ಆಗಮಿಸಿದ್ದ ರೈತರು ಬೀಜ ಸಿಗದೇ ನಿರಾಸೆಯಿಂದ ತೆರಳಿದರು. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ತಾಲೂಕುಗಳಿಗೆ ವಾಡಿಕೆ ಪ್ರಕಾರ ಬೀಜದ ದಾಸ್ತಾನು ಹೊಂದಲಾಗಿತ್ತು.
ಹೆಚ್ಚಿನ ರೈತರು ಸೋಯಾಬೀನ್ ಬೆಳೆಗೆ ಆದ್ಯತೆ ನೀಡುತ್ತಿರುವುದರಿಂದ ಬೀಜ ವಿತರಣೆಗೆ ಕೊರತೆಯಾಗುತ್ತಿದೆ. ಶುಕ್ರವಾರ ಬೀಜದ ಲೋಡ್ ಬರಲಿದ್ದು, ಕೂಡಲೇ ವಿತರಣೆಗೆ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. ಕರೊನಾ ವೈರಸ್ ತಡೆಗೆ ಜಾಗೃತಿ ಮೂಡಿಸಿದ್ದರೂ ಯಾರೂ ನಿಯಮ ಪಾಲಿಸುತ್ತಿಲ್ಲ ಎಂಬ ಮಾತು ಅಧಿಕಾರಿಗಳ ವಲಯದಲ್ಲಿಯೂ ಕೇಳಿ ಬರುತ್ತಿದೆ.
ಕಿತ್ತೂರ, ಬೈಲಹೊಂಗಲ ತಾಲೂಕಿನ 29 ಬೀಜ ವಿತರಣಾ ಕೇಂದ್ರದಲ್ಲಿ 17 ಸಾವಿರ ಕ್ವಿಂಟಾಲ್ ಸೋಯಾಬೀನ್ ಬೀಜದ ದಾಸ್ತಾನು ಇದ್ದು, ಈಗಾಗಲೇ 13 ಸಾವಿರ ಕ್ವಿಂಟಾಲ್ ವಿತರಣೆಯಾಗಿದೆ. ಕೆಲ ಕೇಂದ್ರಗಳಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಸ್ಟಾಕ್ ಖಾಲಿ ಅಗಿದ್ದು, ಕೂಡಲೇ ವ್ಯವಸ್ಥೆ ಮಾಡಲಾಗುವುದು. ದೈಹಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿ ಬೀಜ ಖರೀದಿಸುವ ಕುರಿತು ಇನ್ನಷ್ಟು ಜಾಗೃತಿ ಮೂಡಿಸಲಾಗುವುದು. | ಪ್ರತಿಭಾ ಹೂಗಾರ ಸಹಾಯಕ ಕೃಷಿ ನಿರ್ದೇಶಕಿ