

ಮಂಡ್ಯ: ಧರ್ಮಸ್ಥಳದಲ್ಲಿ ಹನ್ನೊಂದು ವರ್ಷಗಳ ಹಿಂದೆ ಅತ್ಯಾಚಾರಕ್ಕೀಡಾಗಿ ಹತ್ಯೆಯಾದ ವಿದ್ಯಾರ್ಥಿನಿ ಸೌಜನ್ಯ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಮಂಗಳವಾರ ನಗರದಲ್ಲಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟಿಸಿದರು.
ಅತ್ಯಾಚಾರ ವಿರೋಧಿ ಆಂದೋಲನ ನೇತೃತ್ವದಲ್ಲಿ ನಗರದ ಸರ್‌ಎಂವಿ ಪ್ರತಿಮೆ ಎದುರಿನಿಂದ ಮೆರವಣಿಗೆ ಹೊರಟ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಡಾ.ಕುಮಾರ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಧರ್ಮಸ್ಥಳದಲ್ಲಿ 2012ನೇ ಅ.9 ರಂದು ವಿದ್ಯಾರ್ಥಿನಿ ಸೌಜನ್ಯ ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದಾಗ ಆಕೆಯನ್ನು ಅಪಹರಣ ಮಾಡಿ ಅತ್ಯಾಚಾರ ಎಸಗಿದ ದುರುಳರು ಹತ್ಯೆ ಮಾಡಿದ್ದರು. ಆದರೆ ಪೊಲೀಸರು ಅಮಾಯಕ ಸಂತೋಷ್‌ರಾವ್ ಎಂಬಾತನನ್ನು ಬಂಧಿಸಿ ಕಿರುಕುಳ ನೀಡಿ ತಾನೇ ಕೃತ್ಯ ಮಾಡಿರುವುದಾಗಿ ಬಲವಂತವಾಗಿ ಒಪ್ಪಿಕೊಳ್ಳುವಂತೆ ಮಾಡಿ ಜೈಲಿಗೆ ಕಳುಹಿಸಿದ್ದರು. ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆತ ನಿರಪರಾಧಿ ಎಂದು ತೀರ್ಪು ಹೊರ ಬಿದ್ದಿದೆ. ಹೀಗಿರುವಾಗ ಅಪರಾಧ ನಡೆದಿದೆ ಎಂದ ಮೇಲೆ ಅಪರಾಧಿ ಇರಬೇಕಲ್ಲವೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಆದ್ದರಿಂದ ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಒಪ್ಪಿಸಿ ಮರು ತನಿಖೆ ನಡೆಸಬೇಕು. ಪೊಲೀಸ್ ದೌರ್ಜನಕ್ಕೆ ಒಳಗಾದ ಸಂತೋಷರಾವ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಅದೇ ರೀತಿ ರಾಯಚೂರಿನಲ್ಲಿ ಈರಮ್ಮ ಅವರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಕಾಮುಕರನ್ನು ಬಂಧಿಸಬೇಕು. ರಾಜಸ್ಥಾನದಲ್ಲಿ ಹೆಣ್ಣು ಮಗಳ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರಶುರಾಮ, ಮಹಿಳಾ ಹೋರಾಟಗಾರ್ತಿ ಸುನಂದಾ ಜಯರಾಮ್, ನಾಗರೇವಕ್ಕ, ಮಹಿಳಾ ಮುನ್ನಡೆಯ ಪೂರ್ಣಿಮಾ, ಶಿಲ್ಪ, ಸೌಮ್ಯ, ಜ್ಯೋತಿ, ನಾಗೇಶ್, ಜನಾರ್ದನ್, ಸಿದ್ದರಾಜು, ಪುರುಷೋತ್ತಮ್ ಇತರರಿದ್ದರು.