2.70 ಲಕ್ಷ ಹೆಕ್ಟೇರ್​ ಬಿತ್ತನೆ ಗುರಿ

28 vikram 4
Published on

ವಿಕ್ರಮ ನಾಡಿಗೇರ ಧಾರವಾಡ
ಕೆಲ ದಿನಗಳ ಹಿಂದೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಮುಂಗಾರು ಹಂಗಾಮಿಗೂ ಮುನ್ನ ಬಿದ್ದ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆ ಬಿರುಸಿನಿಂದ ಶುರುವಾಗಿದೆ.
ಜಿಲ್ಲೆಯಲ್ಲಿ ಏಪ್ರಿಲ್​ನಿಂದ ಮೇವರೆಗೆ ಆಗಬೇಕಿದ್ದ ಪೂರ್ವ ಮುಂಗಾರು ಮಳೆಯು ವಾಡಿಕೆ (91.9 ಮಿ.ಮೀ)ಗಿಂತ ಅಧಿಕ ಪ್ರಮಾಣ (120.1 ಮಿ.ಮೀ)ದಲ್ಲಿ ಆಗಿದೆ. ಇದರಿಂದ ಈ ಬಾರಿ ಉತ್ತಮ ಮಳೆಯಾಗಿ ಒಳ್ಳೆ ಫಸಲು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಭೂಮಿ ಹದ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಕೃಷಿ ಇಲಾಖೆಯು ಜಿಲ್ಲೆಯಲ್ಲಿ ಒಟ್ಟು 2,70,840 ಹೆಕ್ಟೇರ್​ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ. ಮೇ ಅಂತ್ಯದಲ್ಲಿ ಬಿತ್ತನೆ ಸಹ ಆರಂಭವಾಗಲಿದೆ. ಬಿತ್ತನೆಗೆ ಅಗತ್ಯವಿರುವಷ್ಟು ಬೀಜ, ರಸಗೊಬ್ಬರ ಮತ್ತು ಇತರ ಸಾಮಗ್ರಿಗಳನ್ನು ಖರೀದಿಸಲು ರೈತರು ಮುಂದಾಗುತ್ತಿದ್ದಾರೆ. ಜೂನ್​ ಮೊದಲ ವಾರದಲ್ಲಿ ಅಧಿಕೃತವಾಗಿ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ.
ಜಿಲ್ಲೆಯಲ್ಲಿ ಪ್ರಮುಖ ಬೆಳೆಗಳಾದ ಹೆಸರು (67,150 ಹೆ), ಹತ್ತಿ (59,000), ಮುಸುಕಿನಜೋಳ (57,175), ಸೋಯಾಅವರೆ (33,100), ಶೇಂಗಾ (25,000), ಉದ್ದು (7,350) ಹಾಗೂ ಭತ್ತ (11,522) ಬೆಳೆಗಳು ಸೇರಿದಂತೆ ಇತರ ಬೆಳೆಗಳನ್ನು ಬೆಳೆಯಲಾಗುತ್ತದೆ. ಈಗಾಗಲೇ ಉತ್ತಮ ಮಳೆ ಬಿದ್ದಿರು ಹಿನ್ನೆಲೆಯಲ್ಲಿ 5262 ಹೆ. ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಬಿತ್ತನೆಗೆ ಅಗತ್ಯವಿರುವ ಬೀಜಗಳ ದಾಸ್ತಾನು ಸಹ ಮಾಡಲಾಗಿದೆ.
ಮುಂಗಾರು ಹಂಗಾಮಿನಲ್ಲಿ ಸಹಾಯಧನದಲ್ಲಿ 20,681 ಕ್ವಿಂಟಲ್​ಗಳಷ್ಟು ವಿವಿಧ ಬೆಳೆಗಳ ಬಿತ್ತನೆ ಬೀಜ ವಿತರಣೆ ಬೇಡಿಕೆ ಇದ್ದು, ಈಗಾಗಲೇ 23,779 ಕ್ವಿಂಟಲ್​ ಬಿತ್ತನೆ ಬೀಜ ಲಭ್ಯವಿದೆ. ಪ್ರಮುಖ ಬೆಳೆಗಳಾದ ಸೋಯಾಅವರೆ -5,230 ಕ್ವಿಂಟಲ್​, ಮೆಕ್ಕೆಜೋಳ- 1050 ಕ್ವಿಂಟಲ್​, ಶೇಂಗಾ- 732 ಕ್ವಿಂಟಲ್​, ಹೆಸರು- 662 ಕ್ವಿಂಟಲ್​, ಉದ್ದು- 246 ಕ್ವಿಂಟಲ್​ ಹಾಗೂ ಭತ್ತ- 140 ಕ್ವಿಂಟಲ್​ ಸೇರಿ ಒಟ್ಟು 8086 ಕ್ವಿಂಟಲ್​ ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗಿದೆ. ವಿತರಣಾ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಸಹ ಆರಂಭಿಸಲಾಗಿದೆ.
ಮುಂಗಾರು ಹಂಗಾಮಿನಲ್ಲಿ ಯೂರಿಯಾ 23,936 ಮೆ.ಟನ್​, ಡಿಎಪಿ 18,613, ಎಂಒಪಿ 2,777, ಕಾಂಪ್ಲೆಕ್ಸ್​ 14,095 ಹಾಗೂ ಎಸ್​ಎಸ್​ಪಿ 743 ಸೇರಿದಂತೆ ಒಟ್ಟು 60,164 ಮೆ. ಟನ್​ ರಸಗೊಬ್ಬರದ ಅಗತ್ಯವಿದೆ. ಬೇಡಿಕೆಗೆ ತಕ್ಕಂತೆ ಗೊಬ್ಬರ ಪೂರೈಸಲು ಈಗಾಗಲೇ ಅಗತ್ಯ ಕ್ರಮ ವಹಿಸಲಾಗಿದೆ.
ರಸಗೊಬ್ಬರ ದಾಸ್ತಾನು ವಿವರ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 56,243 ಮೆಟ್ರಿಕ್​ ಟನ್​ನಷ್ಟು ವಿವಿಧ ಗ್ರೇಡ್​ಗಳ ರಸಗೊಬ್ಬರಗಳ ಅವಶ್ಯಕತೆ ಇದ್ದು, ಮೇ ಅತ್ಯಂಕ್ಕೆ 16,749 ಮೆಟ್ರಿಕ್​ ಟನ್​ ದಾಸ್ತಾನು ಮಾಡಲಾಗಿದೆ. ಯೂರಿಯಾ- 6478.66 ಮೆ.ಟನ್​, ಡಿಎಪಿ- 6570.42, ಎಂಒಪಿ -567.18, ಕಾಂಪ್ಲೆಕ್ಸ್​ -2767.17, ಎಸ್​ಎಸ್​ಪಿ -366.12 ರಸಗೊಬ್ಬರದ ಬೇಡಿಕೆ ಇದೆ. ಈ ಪೈಕಿ ಈಗಾಗಲೇ ಮೇ 24ರವರೆಗೆ ಯೂರಿಯಾ -7588 ಮೆ.ಟನ್​, ಡಿಎಪಿ- 4752, ಎಂಒಪಿ -207, ಕಾಂಪ್ಲೆಕ್ಸ್​ -1632, ಎಸ್​ಎಸ್​ಪಿ -142 ಮೆ.ಟನ್​ ಸೇರಿ ಒಟ್ಟು 14,321 ಮೆಟ್ರಿಕ್​ ಟನ್​ ರಸಗೊಬ್ಬರ ವಿತರಿಸಲಾಗಿದೆ. ಅಲ್ಲದೆ ಚಿಲ್ಲರೆ ಮತ್ತು ಸಗಟು ಮಾರಾಟ ಮಳಿಗೆಗಳಲ್ಲಿ 10,444.37 ಮೆ.ಟನ್​, ಕಾಪು ದಾಸ್ತಾನಾಗಿ 3744.50 ಮೆ.ಟನ್​, ವೇರ್​ ಹೌಸ್​ ದಾಸ್ತಾನಾಗಿ 12,343.90 ಮೆ.ಟನ್​ ಹಾಗೂ ಸಾಗಾಣಿಕೆ ಮತ್ತು ಮಿಶ್ರಣ ಘಟಕಗಳಲ್ಲಿರುವ ದಾಸ್ತಾನು ಸೇರಿ ಯೂರಿಯಾ- 10,272, ಡಿಎಪಿ- 4,118, ಎಂಒಪಿ- 1,840, ಕಾಂಪ್ಲೆಕ್ಸ್​ 12,794, ಎಸ್​ಎಸ್​ಪಿ- 481 ಒಟ್ಟು 29,507.39 ಮೆಟ್ರಿಕ್​ ಟನ್​ ದಷ್ಟು ರಸಗೊಬ್ಬೆ ಜಿಲ್ಲೆಯಲ್ಲಿ ದಾಸ್ತಾನಿದೆ.

ರೈತರಿಗೆ ಸಮಸ್ಯೆ ಆಗದಿರಲಿ ಎಂದು 31 ಕೇಂದ್ರಗಳ ಮೂಲಕ ಅಗತ್ಯ ಬಿತ್ತನೆ ಬೀಜ ಹಾಗೂ ಸೊಸೈಟಿ, ಖಾಸಗಿ ಮಾರಾಟಗಾರರು ಸೇರಿ ಸುಮಾರು 500 ಕೇಂದ್ರಗಳಲ್ಲಿ ರಸಗೊಬ್ಬರ ವಿತರಣೆಗೆ ಕ್ರಮವಹಿಸಲಾಗಿದೆ. ಆದಾಗ್ಯೂ ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಬೀಜ, ಗೊಬ್ಬರ ವಿತರಿಸಲು ಅನಗತ್ಯ ಷರತ್ತು ವಿಧಿಸುವುದು, ಕೃತಕ ಅಭಾವ ಸೃಷ್ಟಿಸಿದರೆ, ಅಂತಹ ಮಾರಾಟಗಾರರ ಲೈಸನ್ಸ್​ ರದ್ದುಪಡಿಸಿ ಕ್ರಿಮಿನಲ್​ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.*ದಿವ್ಯ ಪ್ರಭು, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net