ಎಲ್ಲ ರೈತರಿಗೂ ಲಭ್ಯವಿವೆ ಬಿತ್ತನೆ ಬೀಜ

27 upbr 1-bittane beeja vitarane
Published on

ಉಪ್ಪಿನಬೆಟಗೇರಿ: ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ವಿತರಿಸುತ್ತಿದ್ದು, ರೈತರು ತಮ್ಮ ಆಧಾರ ಕಾರ್ಡ್ ಇಲ್ಲವೆ ಎಫ್​ಐಡಿ ನೀಡಿ ಬೀಜ ಪಡೆದುಕೊಳ್ಳಬೇಕು ಎಂದು ಅಮ್ಮಿನಬಾವಿ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಎಚ್.ಎಂ. ಬದಾಮಿ ಹೇಳಿದರು.

ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತೆರೆಯಲಾದ ಹೆಚ್ಚುವರಿ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ವಿತರಿಸಿ ಅವರು ಮಾತನಾಡಿದರು. ಶೆಂಗಾ, ಹೆಸರು ಹಾಗೂ ಉದ್ದು ಬೆಳೆಯ ಬೀಜಗಳನ್ನು ಈಗಾಗಲೇ ದಾಸ್ತಾನು ಮಾಡಿಕೊಳ್ಳಲಾಗಿದ್ದು, ಬಿತ್ತನೆ ಬೀಜಗಳ ಕೊರತೆಯಾಗದಂತೆ ಮುಂಜಾಗ್ರತೆ ಕ್ರಮ ವಹಿಸಲಾಗಿದೆ ಎಂದರು.

ಪಿಕೆಪಿಎಸ್ ಅಧ್ಯಕ್ಷ ರಾಮಲಿಂಗಪ್ಪ ನವಲಗುಂದ ಮಾತನಾಡಿ, ರೈತರ ಅನುಕೂಲಕ್ಕೆಂದು ನಮ್ಮ ಸಂಘದಲ್ಲಿ ತೆರೆಯಲಾದ ಹೆಚ್ಚುವರಿ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಗಳನ್ನು ವಿತರಣೆಗೆ ಅನುಕೂಲ ಮಾಡಿಕೊಡಲಾಗಿದೆ. ಎಲ್ಲ ರೈತರಿಗೂ ಬಿತ್ತನೆ ಬೀಜಗಳು ಲಭ್ಯವಿದ್ದು, ಯಾವುದೇ ಗದ್ದಲ ಮಾಡದೆ ಸರತಿ ಸಾಲಿನಲ್ಲಿ ನಿಂತು ಬಿತ್ತನೆ ಬೀಜಗಳನ್ನು ಪಡೆಯಬೇಕು ಎಂದರು.

ಆತ್ಮಾ ಸಿಬ್ಬಂದಿ ಸವಿತಾ ತಡಕೋಡ, ಧರೆಪ್ಪ ಬೊಬ್ಬಿ, ಮಡಿವಾಳಪ್ಪ ಮೆಟ್ಟಿನ್, ರವೀಂದ್ರ ಅಷ್ಟೇಕರ, ಕಲ್ಲಪ್ಪ ಕಿತ್ತೂರ, ನಾಗಪ್ಪ ಪೂಜಾರ, ಮಂಜುನಾಥ ಬೆಳವಡಿ, ನಿಂಗಪ್ಪ ಚಂದರಗಿ, ಕಾಶೀನಾಥ ದೊಡವಾಡ, ಪೊಲೀಸ್ ಸಿಬ್ಬಂದಿ ಐ.ಆರ್. ಯಕ್ಕುಂಡಿ, ಜಿ.ಡಿ. ಕಿಲ್ಲೇದಾರ, ವಿಠ್ಠಲ ಈಟಿ ಹಾಗೂ ಸುತ್ತಲಿನ ಗ್ರಾಮಗಳ ರೈತರು ಹಾಜರಿದ್ದರು.

ಬೀಜಗಳ ದರ: ಹೆಸರು 5 ಕೆಜಿ ಪಾಕೆಟ್ ಸಾಮಾನ್ಯ ವರ್ಗ ರೈತರ ವಂತಿಗೆ 805 ರೂ., ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ 743 ರೂ.,

ಉದ್ದು 5 ಕೆಜಿ ಪಾಕೇಟ್ ಸಾಮಾನ್ಯ ವರ್ಗ ರೈತರ ವಂತಿಗೆ 660 ರೂ., ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ 598 ರೂ., ಶೇಂಗಾ ಬೀಜ 30 ಕೆಜಿ ಪಾಕೇಟ್ ಸಾಮಾನ್ಯ ವರ್ಗ ರೈತರ ವಂತಿಗೆ 2400 ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ 2175 ರೂ.ನಿಗದಿಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net