

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಸಕ್ತ ಮುಂಗಾರು ಹಂಗಾಮಿಗೆ ರಾಜ್ಯ ಸರ್ಕಾರ ರೈತ ಸಂಪರ್ಕ ಕೇಂದ್ರಗಳ ಮೂಲಕ ನೀಡುವ ರಿಯಾಯಿತಿ ದರದ ಬಿತ್ತನೆ ಬೀಜಗಳ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಳೆದ ವರ್ಷ ಬರದಿಂದ ಕಂಗೆಟ್ಟಿರುವ ರೈತರಿಗೆ ಈ ಬಾರಿ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬಿಜೆಪಿ ಮುಖಂಡ, ವಕೀಲ ಪಿ.ಎಚ್. ನೀರಲಕೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಸರ್ಕಾರ ರೈತರಿಗೆ ದಿಢೀರ್ ಆಘಾತ ನೀಡಿದ್ದು, ಮುಂಗಾರು ಬಿತ್ತನೆ ಬೀಜಗಳ ದರವನ್ನು ಶೇ.60 ರಿಂದ ಶೇ. 70ರಷ್ಟು ಏರಿಕೆ ಮಾಡಿದೆ. ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಾದ ತೊಗರಿ, ಹೆಸರು, ಮೆಕ್ಕೆಜೋಳ ಬಿತ್ತನೆ ಬೀಜಗಳ ದರ ಹೆಚ್ಚಳವಾಗಿದೆ. ಕಳೆದ ವರ್ಷ ಸಬ್ಸಿಡಿ ಹೊರತುಪಡಿಸಿ ಸಾಮಾನ್ಯ ವರ್ಗಕ್ಕೆ ಮೆಕ್ಕೆಜೋಳ (5ಕೆಜಿ ಪ್ಯಾಕೆಟ್) 501 ರೂ., ಎಸ್ಸಿ, ಎಸ್ಟಿ ವರ್ಗಕ್ಕೆ 438 ರೂ. ಇತ್ತು. ಈ ಬಾರಿ 805 ರೂ. ಹಾಗೂ ಎಸ್ಸಿ, ಎಸ್ಟಿ ವರ್ಗಕ್ಕೆ 742ರೂ. ನಿಗದಿ ಮಾಡಲಾಗಿದೆ. ಹೀಗಾಗಿ ರೈತರು ಸಾಲ ಮಾಡುವ ಸ್ಥಿತಿ ಎದುರಾಗಿದೆ.
ಕಳೆದ ವರ್ಷ ಮಳೆ ಇಲ್ಲದೆ ಬೆಳೆ ಬಂದಿಲ್ಲ. ರೈತರು ತೀರಾ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉಚಿತವಾಗಿ ಬೀಜ ನೀಡಬೇಕಿತ್ತು. ಅದು ಬಿಟ್ಟು ಬೆಲೆ ಹೆಚ್ಚಿಸಿರುವುದು ರೈತರಿಗೆ ಬಲವಾದ ಹೊಡೆತ ಬಿದ್ದಿದೆ. ಕಳೆದ ವರ್ಷ ರೈತರು ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದರು. ಆದರೆ ಮಳೆ ಆಗದೆ ಬೆಳೆ ಬರದೆ ಸಂಕಷ್ಟದಲ್ಲಿದ್ದಾರೆ. ಈಗ ಹೊಸದಾಗಿ ಬೀಜ ಮತ್ತು ಗೊಬ್ಬರಕ್ಕೆ ಮತ್ತೆ ಸಾಲ ಮಾಡಬೇಕು. ಬೆಲೆ ಹೆಚ್ಚಳ ಮಾಡಿರುವುದು ಮತ್ತೆ ಸಂಕಷ್ಟಕ್ಕೆ ನೂಕಿದಂತಾಗಿದೆ. ಭೀಕರ ಬರದಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ. ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉಚಿತವಾಗಿ ಬೀಜ ನೀಡಬೇಕು. ಇಲ್ಲದಿದ್ದರೆ ಸಬ್ಸಿಡಿ ಹೆಚ್ಚಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.