

ಕೆ.ಕೆಂಚಪ್ಪ ಮೊಳಕಾಲ್ಮೂರು
ಈ ವರ್ಷವೂ ಕೈಕೊಡುವ ಮಳೆಯ ಮುನ್ಸೂಚನೆ ದೊರೆತಿದ್ದು, ಬರೋಬ್ಬರಿ 27 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಶೇಂಗಾ, ತೊಗರಿ, ಔಡಲ ಸೇರಿ ಇತ್ಯಾದಿ ಬೆಳೆಗಳು ರೈತರ ಕೈಸೇರುವುದು ಬಹುತೇಕ ಅನುಮಾನ ಎನಿಸುತ್ತಿದೆ.
32,500 ಹೆಕ್ಟೇರ್ ಪ್ರದೇಶದ ಪೈಕಿ ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಶೇಂಗಾ 18,500 ಹೆ., ತೊಗರಿ 700 ಹೆ., ಔಡಲ 250 ಹೆ., ಹತ್ತಿ 4700 ಹೆ., ಮೆಕ್ಕೇಜೋಳ 1500 ಹೆ. ಒಟ್ಟು 26,700 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ.
ಪ್ರಧಾನ ಬೆಳೆ ಶೇಂಗಾ 27.750 ಕ್ವಿಂಟಾಲ್ ಬಿತ್ತನೆ ಆಗಿದೆ. ತೇವಾಂಶ ಇಲ್ಲದೆ ಭೂಮಿ ಬಿಟ್ಟು ಮೇಲೆ ಬರಲು ತಿಣುಕಾಡುತ್ತಿರುವ ಶೇಂಗಾ, ಬಾಡುತ್ತಿರುವ ತೊಗರಿ, ಔಡಲ, ಹತ್ತಿ ಫಸಲು ಮಳೆಗಾಗಿ ಮುಗಿಲು ನೋಡುತ್ತಿವೆ.
ಇನ್ನು ನೀರಾವರಿ ಮೂಲ ಬೆಳೆಗಳಾದ ಹತ್ತಿ, ಮೆಕ್ಕೆಜೋಳ, ರೋಗ ಬಾಧೆ ರೈತರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದರೆ, ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಈ ವರ್ಷವೂ ಬರ ಕಾಡುತ್ತಿದೆ.
ಅದರಲ್ಲೂ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳಲ್ಲಿ ವರ್ಷದ ಮುಂಗಾರು ಮಳೆ ಆರಂಭದಲ್ಲಿ ಭೀಕರ ಬರವನ್ನು ಮರೆಸಿತ್ತಾದರೂ ಅದು ಬಹಳ ದಿನ ಇರಲಿಲ್ಲ.
ಕಳೆದೆರಡು ತಿಂಗಳ ಅವಧಿಯ ಮುಂಗಾರು ಬಿತ್ತನೆ ವೇಳೆ ಮಳೆ ಕೈಕೊಟ್ಟಿತು. ಬಂದ ಅಲ್ಪ-ಸ್ವಲ್ಪ ತುಂತುರು ಮಳೆಯನ್ನು ನಂಬಿ ಭೂತಾಯಿ ಮಡಿಲಿಗೆ ಹಾಕಿರುವ ಕೋಟಿ- ಕೋಟಿ ಬಂಡವಾಳ ಕೈಸೇರುವ ನಂಬಿಕೆ ಹುಸಿಯಾಗುವ ಪರಿಸ್ಥಿತಿ ರೈತರ ನಿದ್ದೆಗೆಡಿಸಿದೆ.
ಯಾವುದೇ ನದಿ ಮೂಲವನ್ನು ಕಾಣದ ಮೊಳಕಾಲ್ಮೂರು ಬಯಲುಸೀಮೆ. ಮಳೆಯಾಶ್ರಿತ ಪ್ರದೇಶದಲ್ಲಿ ಇರುವ ಭೂಮಿಯನ್ನು ನಂಬಿರುವ ರೈತ ಉತ್ತಿ, ಬೆಳೆದು ಉಣಬೇಕೆಂದರೆ ವರುಣನ ಕೃಪೆ ಬೇಕು.
ಇಲ್ಲವಾದರೆ ದೇವರೇ ಕಾಪಾಡಬೇಕು. ಇದು ಕಳೆದ 25 ವರ್ಷಗಳಿಂದ ಶಾಪಗ್ರಸ್ತವಾಗಿ ಕಾಡುತ್ತಿರುವ ಭೀಕರ ಬರದಿಂದ ಇರುವ ಕೆರೆ, ಕಟ್ಟೆಗಳೂ ಬರಿದಾಗಿವೆ. ಅಂತರ್ಜಲ ಕುಸಿತದಿಂದ ಇರುವ ಕೊಳವೆ ಬಾವಿಗಳೂ ತಳ ಕಂಡಿರುವ ಕಾರಣ ತೋಟಗಾರಿಕೆ ಬೆಳೆಗಳಿಗೂ ಕುತ್ತು ಬಂದೊದಗಿದೆ.
ಬರಿದಾದ ಕೆರೆಗಳು: ತಾಲೂಕಿನಲ್ಲಿ 20 ಕ್ಕೂ ಹೆಚ್ಚು ಕೆರೆಗಳಿವೆ. ಮೇ ತಿಂಗಳಲ್ಲಿ ಬಂದ ಮಳೆಗೆ ಪಕ್ಕುರ್ತಿ ಕೆರೆ ತುಂಬಿದ್ದು ಬಿಟ್ಟರೆ ಇಲ್ಲಿಯತನಕ ಯಾವೊಂದು ಕೆರೆಗಳಿಗೂ ನೀರು ಹರಿದಿಲ್ಲ. ಮೊಳಕಾಲ್ಮೂರು ಪಟ್ಟಣಕ್ಕೆ ಕುಡಿವ ನೀರಿನ ಜೀವನಾಡಿಯಾಗಿರುವ ರಂಗಯ್ಯನದುರ್ಗ ಜಲಾಶಯ ತಳ ಕಂಡಿದೆ. ಒಂದೆರಡು ತಿಂಗಳಿಗೆ ಮಾತ್ರ ನೀರಿನ ಲಭ್ಯತೆ ಇದೆ. ಮಳೆ ಮುನಿದರೆ ಸಂಪೂರ್ಣ ಬತ್ತಲಿದೆ.
ಇನ್ನು ತುಂಗಾ ಭದ್ರಾ ಹಿನ್ನೀರು ಯೋಜನೆ ಕುಡಿವ ನೀರು ಇನ್ನೇನು ಒಂದೆರಡು ತಿಂಗಳಲ್ಲಿ ಮನೆ ಬಾಗಿಲಿಗೆ ಗಂಗೆ ಹರಿಯಲಿದ್ದಾಳೆ ಎಂದು ಖುಷಿಯಲ್ಲಿದ್ದ ಜನರ ಆಸೆ ಈಡೇರಲು ಸದ್ಯದ ಪರಿಸ್ಥಿತಿ ಹದಗೆಟ್ಟಿದೆ.
ಹೊಸಪೇಟೆ ಡ್ಯಾಂನ 19ನೇ ಗೇಟ್ ತುಂಡಾಗಿ ನೀರು ವ್ಯರ್ಥವಾಗಿ ಹರಿಯುತ್ತಿದ್ದು ಆತಂಕ ತಂದೊಡ್ಡಿದೆ. ಮುಂದೆ ಅನ್ನ, ನೀರಿನ ಪರಿತಾಪ ಕಾಡುವ ಸಾಧ್ಯತೆ ಹೆಚ್ಚು.
ಒಂದೆಡೆ ಅತಿವೃಷ್ಟಿ ಜನರ ಬದುಕನ್ನೇ ಹಾಳು ಮಾಡಿದೆ. ಇನ್ನೊಂದೆಡೆ ಭೀಕರ ಬರದಿಂದ ಅನ್ನ, ನೀರಿಗೂ ಪರಿತಾಪ ತಂದೊಡ್ಡುವ ವಾತಾವರಣ ಸೃಷ್ಟಿಯಾಗಿದೆ. ವರ್ಷದ ಮುಂಗಾರು ಉತ್ತಮ ಮುನ್ಸೂಚನೆ ಇದ್ದರೂ ಕೈಕೊಟ್ಟಿದೆ. ಇನ್ನೂ ಕಾಲ ಮಿಂಚಿಲ್ಲ. ವರುಣ ಕೃಪೆ ತೋರಲಿ ಎಂದು ಪ್ರಾರ್ಥಿಸುತ್ತೇವೆ.ಪ್ರಕಾಶ್, ಕೃಷಿ ಅಧಿಕಾರಿ